

ಮೈಸೂರು: ‘ಕಾಂತಾರ’ ಚಿತ್ರ ತಂಡ ಯುವ ಸಂಭ್ರಮ ಕಾರ್ಯಕ್ರಮಕ್ಕೆ ಆಗಮಿಸಿ ಯುವಜರನ್ನು ರಂಜಿಸಿದರು. ಚಿತ್ರದ ನಾಯಕ ನಟ ರಿಷಬ್ ಶೆಟ್ಟಿ ಚಿತ್ರದ ಡೈಲಾಗ್‌ಗಳನ್ನು ಹೇಳಿ ಹಾಗೂ ವರನಟ ಡಾ.ರಾಜ್ ಕುಮಾರ್ ಅವರ ಮಾತುಗಳನ್ನು ಮಿಮಿತ್ರಿಕ ಮಾಡುವ ಮೂಲಕ ಎಲ್ಲರ ಮನ ಗೆದ್ದರು.
ಅಪ್ಪು ಅಭಿನಯಿಸಬೇಕಾಗಿದ್ದ ಸಿನಿಮಾ: ಕಾಂತಾರ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯಿಸಬೇಕಾಗಿತ್ತು. ಆದರೆ, ಸಮಯ ಹೊಂದಾಣಿಕೆಯಿಂದ ಅದು ಸಾಧ್ಯವಾಗಿಲ್ಲ ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು.
ಕಾಂತಾರ ಚಿತ್ರದ ಕತೆಯನ್ನು ಅಪ್ಪು ಸರ್‌ಗೆ ಹೇಳಿದ್ದೆ. ಅವರು ಕತೆಯನ್ನು ಬಹಳ ಮೆಚ್ಚಿಕೊಂಡಿದ್ದರು. ಚಿತ್ರೀಕರಣದ ಸಂದರ್ಭ ಕರೆ ಮಾಡಿ ಕತೆ ಹೇಳಿದ ರೀತಿಯಲ್ಲಿಯೇ ಚಿತ್ರ ಮೂಡಿ ಬರುತ್ತಿದೆಯೇ ಎಂದು ವಿಚಾರಿಸಿಕೊಳ್ಳುತ್ತಿದ್ದರು. ಹಾಗಾಗಿ ಈ ಸಿನಿಮಾವನ್ನು ಅಪ್ಪು ಅವರಿಗೆ ಅರ್ಪಣೆ ಮಾಡುತ್ತಿದ್ದೇವೆ ಎಂದರು.
ಕನ್ನಡ ಸಿನಿಮಾವನ್ನು ಕನ್ನಡ ನೆಲದಲ್ಲಿಯೇ ಬಿಡುಗಡೆ ಮಾಡಲು ಸಾಧ್ಯವಾಗದ ವಾತಾವರಣ ಈ ಹಿಂದೆ ನಿರ್ಮಾಣವಾಗಿತ್ತು. ಆದರೆ, ಇಂದು ಕನ್ನಡ ನಾಡನ್ನು ದಾಟಿ ಎಲ್ಲ ಕಡೆಗಳಲ್ಲಿ ಗೆಲುವು ಸಾಧಿಸುತ್ತಿದೆ. ಅದಕ್ಕೆ ಕೆಜಿಎಫ್ ಸಿನಿಮಾ ದಾರಿ ಮಾಡಿಕೊಟ್ಟಿದೆ. ‘ಕಾಂತಾರ’ ಸಿನಿಮಾವನ್ನು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಬಿಡುಗಡೆ ಮಾಡಲಾಗುವುದು. ಇದು ಅಪ್ಪಟ ಕನ್ನಡ ಮಣ್ಣಿನ ಸಿನಿಮಾವಾಗಿರುವ ಹಿನ್ನೆಲೆಯಲ್ಲಿ ಚಿತ್ರವನ್ನು ಹೊರ ರಾಜ್ಯದಲ್ಲೂ ಕನ್ನಡ ಭಾಷೆಯಲ್ಲಿಯೇ ಪ್ರದರ್ಶಿಸಲಾಗುವುದು. ಆದರೆ, ಸಬ್ ಟೈಟಲ್ ವಿವಿಧ ಭಾಷೆಗಳಲ್ಲಿ ಇರಲಿದೆ ಎಂದರು.