

ಡಾ.ರೇವಣ್ಣಸಿದ್ದಪ್ಪ ಕುಳ್ಳೂರ ರಾಮದುರ್ಗ
ಬಿಡ್ಜ್ ಕಂ ಬ್ಯಾರೇಜ್‌ಗೆ ತಡೆಗೋಡೆ ಇಲ್ಲದೇ ಇರುವ ಕಾರಣಕ್ಕೆ ಈ ಮಾರ್ಗವಾಗಿ ಸಂಚಾರ ಮಾಡುವ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ಇದೆ.
ರಾಮದುರ್ಗ-ಘಟಕನೂರು ಸಂಪರ್ಕಿಸುವ ಒಳರಸ್ತೆ ಮಾರ್ಗದಲ್ಲಿ ಮಲಪ್ರಭಾ ನದಿಗೆ ಅಡ್ಡಲಾಗಿ ಬಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ. ಆದರೆ, ಇದಕ್ಕೆ ತಡೆಗೋಡೆ ನಿರ್ಮಾಣ ಮಾಡದೇ ಇರುವುದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಈ ಮಾರ್ಗವಾಗಿ ಸಂಚಾರ ಮಾಡುವ ಬೈಕ್ ಸವಾರರು ಜೀವ ಭಯದಲ್ಲೇ ಸೇತುವೆ ದಾಟುವಂತಾಗಿದೆ.
ಇನ್ನೂ ಬಿಡ್ಜ್ ಕಂ ಬ್ಯಾರೇಜ್ ಕಿರಿದಾಗಿರುವ ಕಾರಣಕ್ಕೆ ಆಕಸ್ಮಿಕವಾಗಿ ಎರಡು ಬೈಕ್‌ಗಳು ಮುಖಾಮುಖಿಯಾಗಿಯಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗೆ ಹಲವು ಸಾರಿ ಅಪಾಯಗಳು ಈ ಮಾರ್ಗದಲ್ಲಿ ಸಂಭವಿಸಿದ್ದು ಉಂಟು. ಇನ್ನೂ ಕೆಲವರು ಆಯತಪ್ಪಿ ಬಿದ್ದು ಪ್ರಾಣಾಪಾಯದಿಂದ ಪಾರಾದ ನಿದರ್ಶನಗಳು ಇವೆ.
ಹೆಚ್ಚು ನೀರು ಬಿಟ್ಟರೆ ಮುಳುಗಡೆ: ಈ ಬಿಡ್ಜ್ ಕಂ ಬ್ಯಾರೇಜ್ ತಳಮಟ್ಟದಲ್ಲಿ ನಿರ್ಮಾಣವಾಗಿರುವ ಕಾರಣಕ್ಕೆ ಹೆಚ್ಚು ಮಳೆಯಾಗಿ ಅಧಿಕ ನೀರು ಬಂದರೆ ಸೇತುವೆ ಮುಳುಗಡೆಯಾಗಿ ಸಂಚಾರ ಬಂದ್ ಆಗುತ್ತದೆ. ಈ ಹಿಂದೆ ಮಲಪ್ರಭೆ ನದಿಗೆ ಪ್ರವಾಹ ಬಂದ ಸಂದರ್ಭದಲ್ಲಿ ಮೂರ‌್ನಾಲ್ಕು ಬಾರಿ ಮುಳುಗಿ ಜನರು ಪರದಾಟ ಅನುಭವಿಸಿದ್ದರು. ಸನಿಹ ಸಂಪರ್ಕ: ರಾಮದುರ್ಗ-ಸುರೇಬಾನಕ್ಕೆ ಹೋಗಬೇಕಾದರೆ ಈ ಮಾರ್ಗದಲ್ಲಿ ಹೋದರೆ ಎರಡು ಕಿಮೀ ದೂರ ಕಡಿಮೆ ಆಗುತ್ತದೆ. ಹೀಗಾಗಿ ಕೊಳಚಿ, ಸುರೇಬಾನ ಸೇರಿದಂತೆ ಇತರ ಊರುಗಳಿಗೆ ಹೋಗುವ ಜನರು ನಿತ್ಯ ಈ ಮಾರ್ಗವನ್ನೇ ಅವಲಂಬಿಸಿದ್ದಾರೆ. ಹೀಗಾಗಿ ದಿನದಿಂದ ದಿನಕ್ಕೆ ಈ ಬಿಡ್ಜ್ ಕಂ ಬ್ಯಾರೇಜ್ ಮೇಲೆ ವಾಹನಗಳ ಸಂಚಾರ ಹೆಚ್ಚುತ್ತಿದೆ. ಆದರೆ, ಭದ್ರತೆ ಮಾತ್ರ ಇಲ್ಲ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ಬಿಡ್ಜ್ ಕಂ ಬ್ಯಾರೇಜ್‌ಗೆೆ ತಡೆಗೋಡೆ ನಿರ್ಮಾಣ ಮಾಡಬೇಕಾಗಿದೆ. ಇಲ್ಲವಾದರಲ್ಲಿ ಮುಂದಾಗುವ ಅನಾಹುತಗಳಿಗೆ ಅಧಿಕಾರಿಗಳೇ ನೇರ ಕಾರಣ. ತಡೆಗೋಡೆ ನಿರ್ಮಿಸದೇ ಹೋದರೆ ಮುಂದಿನ ದಿನಗಳಲ್ಲಿ ಹೋರಾಟ ಸಹಿತ ಮಾಡಲಾಗುವುದು ಎಂದು ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ರಾಮದುರ್ಗ-ಘಟಕನೂರು ಮಧ್ಯೆ ಮಲಪ್ರಭಾ ನದಿಗೆ ನಿರ್ಮಾಣ ಮಾಡಲಾಗಿರುವ ಬಿಡ್ಜ್ ಕಂ ಬ್ಯಾರೇಜ್‌ಗೆ ತಡೆ ಗೋಡೆ ಇಲ್ಲದೇ ಇರುವುದು ಸವಾರರ ಆತಂಕಕ್ಕೆ ಕಾರಣವಾಗಿದೆ. ದಿನದಿಂದ ದಿನಕ್ಕೆ ಈ ಮಾರ್ಗದಲ್ಲಿ ಬೈಕ್‌ಗಳ ಸಂಚಾರ ಹೆಚ್ಚಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಇದಕ್ಕೆ ತಡೆಗೋಡೆ ನಿರ್ಮಾಣ ಮಾಡಿ ಮುಂದಾಗುವ ಅನಾಹುತ ತಪ್ಪಿಸಬೇಕು. ಭರಮಪ್ಪ ಶೇಷಾದ್ರಿ, ಘಟಕನೂರು ಗ್ರಾಪಂ ಉಪಾಧ್ಯಕ್ಷ