ಕಂಸಾಗರ ಸರ್ಕಾರಿ ಶಾಲೆ ಮಾದರಿ

KDR mlas
ಕಂಸಾಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮೃತ ಮಹೋತ್ಸವ ಸಮಾರಂಭವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಕಂಸಾಗರ ಸೋಮಶೇಖರ್, ಶರತ್‌ಕೃಷ್ಣಮೂರ್ತಿ, ಕೆ.ಎನ್.ಬೊಮ್ಮಣ್ಣ, ಜಿ.ತಿಮ್ಮಯ್ಯ ಇತರರಿದ್ದರು.
Published on

ಕಡೂರು: ಖಾಸಗಿ ಶಾಲೆಗಳ ಪೈಪೋಟಿ ನಡುವೆಯೂ ಕಂಸಾಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಮಾದರಿ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಕಂಸಾಗರದಲ್ಲಿ ಭಾನುವಾರ ಕಂಸಾಗರ ಗ್ರಾಮಸ್ಥರು ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೇ ವಿದ್ಯಾರ್ಥಿಗಳ ಸಹಯೋಗದಲ್ಲಿ ನಡೆದ ಶಾಲೆಯ ಅಮೃತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಸ್ವಾತಂತ್ರೃ ಪೂರ್ವದಲ್ಲಿ ಆರಂಭವಾದ ಶಾಲೆ ಸಾರ್ಥಕ 75 ವರ್ಷಗಳನ್ನು ಪೂರೈಸಿದೆ. ಈ ಅವಧಿಯಲ್ಲಿ ಶಾಲೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ವಕೀಲರಾಗಿ, ವಿಜ್ಞಾನಿಗಳಾಗಿ, ಪ್ರಾಧ್ಯಾಪಕರಾಗಿ, ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದು, ಹುಟ್ಟೂರಿನ ಶಾಲೆ ಮೇಲೆ ಅಭಿಮಾನವಿಟ್ಟುಕೊಂಡಿರುವುದು ಹೆಮ್ಮೆಯ ಸಂಗತಿ. ಶಾಲೆಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿಕೊಡಲು ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದರು.
ಸರಸ್ವತೀಪುರ ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿ ರೈತರಿಗೆ ತೊಂದರೆಯಾಗಿದೆ. ಶೀಘ್ರದಲ್ಲಿ ಈ ಭಾಗಕ್ಕೆ ಅನುಕೂಲವಾಗುವಂತೆ ಎಂಎಸ್‌ಎಸ್ ಕೇಂದ್ರ ಸ್ಥಾಪನೆ ಮಾಡಲಾಗುವುದು. ಗ್ರಾಮದ ಅಂಗನವಾಡಿ ಕಟ್ಟಡಕ್ಕೆ ಹೊಸ ರೂಪ ಕೊಡಲಾಗುವುದು. ರಾಷ್ಟ್ರೀಯ ಹೆದ್ದಾರಿಯಿಂದ ಕಂಸಾಗರ ಗ್ರಾಮಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಿಸಲು ಅನುದಾನ ನೀಡಲಾಗುತ್ತದೆ ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಿದ್ದಾರೆಂಬುದನ್ನು ಗಮನಿಸಿ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಬೇಕು. ಶಾಲೆಯ ಗುಣಾತ್ಮಕ ಶಿಕ್ಷಣ ಮಕ್ಕಳ ಭವಿಷ್ಯಕ್ಕೆ ಪೂರಕವಾಗಿರಲಿದೆ ಎಂದರು.
ಸರಸ್ವತೀಪುರ ಗ್ರಾಪಂ ಅಧ್ಯಕ್ಷ ಕಂಸಾಗರ ಸೋಮಶೇಖರ್ ಮಾತನಾಡಿ, ಶಾಲೆ ಆರಂಭಿಸಲು ನನ್ನ ಕುಟುಂಬದ ಹಿರಿಯರು ನಿವೇಶನ ನೀಡಿದ್ದರು. ನಾನು ಓದಿದ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವುದು ಸಂತಸ ತಂದಿದೆ. ಗ್ರಾಮದ ಎರಡು ದೇಗುಲಗಳಿಗೆ ಶಾಸಕ 10 ಲಕ್ಷ ರೂಪಾಯಿಗೂ ಹೆಚ್ಚು ಅನುದಾನ ನೀಡಿದ್ದಾರೆ. ರಸ್ತೆ, ಅಂಗನವಾಡಿ ಮುಂತಾದ ಸೌಲಭ್ಯಗಳನ್ನೂ ನೀಡಿದ್ದಾರೆ ಎಂದು ತಿಳಿಸಿದರು.
ಬೆಂಗಳೂರಿನ ಹಿರಿಯ ಸಿವಿಲ್ ನ್ಯಾಯಾಧೀೀಶ ಜಿ.ತಿಮ್ಮಯ್ಯ, ಹಿರಿಯ ವಕೀಲ ಕೆ.ಎನ್.ಬೊಮ್ಮಣ್ಣ, ಕಂಸಾಗರ ರೇವಣ್ಣ, ಐಟಿಸಿ ಕಂಪನಿ ಉನ್ನತ ಅಧಿಕಾರಿ ದಿನೇಶ್, ಶಾಲೆಯ ಹಳೆಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಗ್ರಾಪಂ ಸದಸ್ಯರಾದ ಮಂಜುಳಮ್ಮ, ಲಾವಣ್ಯ ವೆಂಕಟೇಶ್, ಉಪನ್ಯಾಸಕ ಗೋಪೀನಾಥ್, ಗ್ರಾಮದ ಹಿರಿಯ ಮಂಜುನಾಥ್, ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net