

ನೆಲಮಂಗಲ: ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಸಾಧನೆಯನ್ನು ಪ್ರತಿ ಮನೆಮನೆಗೆ ತಲುಪಿಸುವ ಕಾರ್ಯ ಪ್ರತಿಯೊಬ್ಬ ಕಾರ್ಯಕರ್ತರ ಕರ್ತವ್ಯ ಎಂದು ಬಿಜೆಪಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಕಾಂತರಾಜು ತಿಳಿಸಿದರು.
ಜ.28ರಂದು ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿರುವ ಸಾಧನ ಸಮಾವೇಶ ಹಿನ್ನೆಲೆಲ್ಲಿ ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಕ್ಷೇತ್ರ ಬಿಜೆಪಿಯಿಂದ ಮಂಗಳವಾರ ಕರೆದಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಇತ್ತೀಚಿಗೆ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಆದಿವಾಸಿ ಸಮುದಾಯ ಮಹಿಳೆ ದ್ರೌಪದಿ ಮುರ್ಮು ಅವರನ್ನು ಬಿಜೆಪಿ ಸರ್ಕಾರ ಬೆಂಬಲಿಸಿದೆ. ದೇಶದ ಇತಿಹಾಸದಲ್ಲಿ ಪ್ರಥಮಬಾರಿಗೆ ಆದಿವಾಸಿ ಮಹಿಳೆಗೆ ರಾಷ್ಟ್ರಪತಿಯಾಗುವ ಅವಕಾಶಕೊಟ್ಟ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಸರ್ಕಾರದ ಆಲೋಚನೆಯನ್ನು ಪ್ರತಿಯೊಬ್ಬ ಕಾರ್ಯಕರ್ತರು ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು.
ಪಕ್ಷದಿಂದ ರಕ್ತದಾನ, ಸ್ವಚ್ಛ ಭಾರತ ಅಭಿಯಾನ ರೂಪಿಸಿದ್ದು, ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ. ಮುಖ್ಯಮಂತ್ರಿಗಳು ಜನಸಾಮಾನ್ಯರ ಮೇಲೆ ಇಟ್ಟಿರುವ ಕಾಳಜಿಯನ್ನು ಅರ್ಥೈಸಿಕೊಳ್ಳಬೇಕು. ಜು.28ರಂದು ನಡೆಯುವ ಸಾಧನಾ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಬಿಜೆಪಿ ಪಕ್ಷ ಶಕ್ತಿ ಪ್ರದರ್ಶನ ಮಾಡಬೇಕಿದೆ ಎಂದರು.
ಜು.21ರಂದು ಮೆರವಣಿಗೆ: ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಗೆಲುವು ಬಹುತೇಕ ಖಚಿತವಾಗಿದೆ. ಆದ್ದರಿಂದ ಜು.21ರಂದು ಕಾರ್ಯಕರ್ತರು ದ್ರೌಪದಿ ಮುರ್ಮು ಅವರ ಭಾವಚಿತ್ರ ಹಿಡಿದು ಮೆರೆವಣಿಗೆ ಮಾಡಬೇಕು. ನಂತರ ಧಾರ್ಮಿಕ ಕೇಂದ್ರದಲ್ಲಿ ಪೂಜೆ ಸಲ್ಲಿಸಬೇಕು. ಹಾಗೆಯೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತಾ ಪತ್ರ ಬರೆಸಬೇಕು ಎಂದು ಬಿಜೆಪಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಕಾಂತರಾಜು ಮಾಹಿತಿ ನೀಡಿದರು.
ಮಾಜಿ ಶಾಸಕ ಎಂ.ವಿ.ನಾಗರಾಜು ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ಅವರ 8 ವರ್ಷದ ಸಾಧನೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸಾಧನೆ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ವರ್ಷ ಪೂರೈಸುತ್ತಿರುವುದು ಹಿನ್ನೆಲೆಯಲ್ಲಿ ಜು.28 ರಂದು ಬೃಹತ್ ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ತಾಲೂಕಿನಿಂದ 15 ಸಾವಿರಕ್ಕೂ ಮಂದಿ ಭಾಗವಹಿಸಬೇಕು ಎಂದು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ. ಅದರಂತೆ ಕ್ಷೇತ್ರ ವ್ಯಾಪ್ತಿಯ ಗ್ರಾಪಂಗೆ ತಲಾ 2 ಬಸ್, ನಗರಸಭೆ ವ್ಯಾಪ್ತಿಯಲ್ಲಿ 10 ಬಸ್ ಸೇರಿ ತಾಲೂಕಿನಾದ್ಯಂತ 100ಕ್ಕೂ ಹೆಚ್ಚು ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಇದೇ ವೇಳೆ ವಿವಿಧ ಕಾರಣಗಳಿಂದ ಮೃತಪಟ್ಟ ಪಕ್ಷದ ಕಾರ್ಯಕರ್ತರಿಗಾಗಿ ಮೌನಾಚರಿಸಿ ಸ್ಮರಿಸಲಾಯಿತು.
ರಾಜ್ಯ ಪರಿಷತ್ ಸದಸ್ಯ ಸುಬ್ಬಣ್ಣ, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಸ್.ಮಲ್ಲಯ್ಯ, ಸದಸ್ಯ ರಮೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಹೊಂಬಯ್ಯ, ಪ್ರಧಾನ ಕಾರ್ಯದರ್ಶಿ ನಾಗರಾಜು, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಎನ್.ರಾಮ್, ಮಹಿಳಾ ಮೋರ್ಚಾ ಅಧ್ಯಕ್ಷೆ ಸೌಮ್ಯಾ, ಬಿಜೆಪಿ ತಾಲೂಕು ಅಧ್ಯಕ್ಷ ಹೇಮಂತ್, ಉಪಾಧ್ಯಕ್ಷ ಜಗದೀಶ್ ಚೌಧರಿ, ನಗರಸಭೆ ಸದಸ್ಯೆ ಎನ್.ಎಸ್.ಪೂರ್ಣಿಮಾ ಸುಗ್ಗರಾಜು, ಹೆಚ್ಚುವರಿ ಸದಸ್ಯರಾದ ಮುನಿರಾಜು, ರಾಮಮೂರ್ತಿ, ಆಂಜಿನಮೂರ್ತಿ, ನಾಮನಿರ್ದೇಶಿತ ಸದಸ್ಯರಾದ ರವಿ, ಕೆ.ವಸಂತ್, ರಾಜಮ್ಮಪ್ರಕಾಶ್, ಮುಖಂಡರಾದ ಭವಾನಿಶಂಕರ್ ಮಂಜುನಾಥ್, ರಾಮಕೃಷ್ಣಪ್ಪ, ಕೇಶವ್, ಮಹಂತೇಶ್ ಮತ್ತಿತರರು ಉಪಸ್ಥಿತರಿದ್ದರು.