ಹುಬ್ಬಳ್ಳಿ : ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ಇತರ ಎಲ್ಲ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಸಂಘ, ಸಂಸ್ಥೆಗಳ ಜತೆಗೂಡಿ ಜೂ. 22 ರಂದು ವಿದ್ಯುತ್ ದರದಲ್ಲಿ ಅಸಹಜ ಬೆಲೆ ಏರಿಕೆ ವಿರೋಧಿಸಿ ರಾಜ್ಯಾದ್ಯಂತ ಒಂದು ದಿನದ ಬಂದ್ಗೆ ಕರೆ ನೀಡಿದೆ.
ಎಸ್ಕಾಂನ ವಿದ್ಯುತ್ ಶುಲ್ಕದಲ್ಲಿ ಅಸಹಜ ಬೆಲೆ ಏರಿಕೆಯನ್ನು ವಿರೋಧಿಸಿ ಎಲ್ಲ ವ್ಯಾಪಾರಸ್ಥರು, ಮತ್ತು ಕೈಗಾರಿಕೆಗಳು ತಮ್ಮ ವ್ಯವಹಾರವನ್ನು ಜೂ. 22 ರಂದು ಬಂದ್ ಮಾಡಲು ವಾಣಿಜ್ಯೋದ್ಯಮ ಸಂಸ್ಥೆ ಕೋರಿದೆ.
ಕಳೆದ 8 ದಿನಗಳಿಂದ ವಿದ್ಯುತ್ ಶುಲ್ಕ ಹೆಚ್ಚಳದಿಂದ ವ್ಯಾಪಾರಸ್ಥರು, ಸಾಮಾನ್ಯ ಜನತೆ ಹಾಗೂ ಕೈಗಾರಿಕೆಗಳ ಮೇಲೆ ಆಗುವ ಪರಿಣಾಮಗಳ ಕುರಿತು ಸರ್ಕಾರಕ್ಕೆ ಗಂಭೀರತೆ ತಿಳಿಸುವ ಪ್ರಯತ್ನ ಮಾಡಲಾಗಿದೆ. ಆದರೆ, ಅಧಿಕಾರಿಗಳು ಮತ್ತು ಸರ್ಕಾರದ ಪ್ರತಿನಿಧಿಗಳಿಂದ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ ಎಂದು ಸಂಸ್ಥೆಯ ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ ಹಾಗೂ ಗೌರವ ಕಾರ್ಯದರ್ಶಿ ಪ್ರವೀಣ ಅಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಸರ್ಕಾರದ ಗಮನ ಸೆಳೆಯಲು ಈ ಬಂದ್ಗೆ ಕರೆ ನೀಡಲಾಗಿದೆ. ವಿದ್ಯುತ್ ಶುಲ್ಕದಲ್ಲಿ ಕಡಿತ ಹಾಗೂ ಪರಿಹಾರ ಕಂಡುಕೊಳ್ಳಲು ಬಯಸುತ್ತೇವೆ ಎಂದು ಹೇಳಿದ್ದಾರೆ.
ಗದಗ, ವಿಜಯಪುರ, ರಾಣೆಬೆನ್ನೂರು, ರಾಯಚೂರು, ತಾಳಿಕೋಟಿ, ವಿಜಯನಗರ, ಮೈಸೂರು, ದಾವಣಗೆರೆ, ಕೊಪ್ಪಳ, ಬಾಗಲಕೋಟಿ, ಧಾರವಾಡ, ಶಿರಸಿ, ಕಾರವಾರ, ಬೀದರ, ಶಿವಮೊಗ್ಗ, ಕೋಲಾರ, ಮಂಡ್ಯ, ಚಿಕ್ಕಮಂಗಳೂರು, ಯಾದಗಿರಿ, ಚಿತ್ರದುರ್ಗ, ಹಾವೇರಿ ಹಾಗೂ ಇತರ ಕೈಗಾರಿಕಾ ಉದ್ಯಮ ಸಂಘಗಳು ಬಂದ್ನಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿವೆ ಎಂದು ತಿಳಿಸಿದ್ದಾರೆ.