

ಉಡುಪಿ : ಕೇರಳದ ಕಣ್ಣೂರು ಬಳಿಯ ಪುನರ್ವಸತಿ ಕೇಂದ್ರದಿಂದ ಮಹಿಳಾ ಭದ್ರತಾ ಸಿಬ್ಬಂದಿಯೊಂದಿಗೆ ತಪ್ಪಿಸಿಕೊಂಡು ಬಂದಿದ್ದ ನಾಲ್ವರು ಪೋಕ್ಸೋ ಸಂತ್ರಸ್ತ ಬಾಲಕಿಯರನ್ನು ಇಂದ್ರಾಳಿ ರೈಲು ನಿಲ್ದಾಣದಲ್ಲಿ ರೈಲ್ವೇ ರಕ್ಷಣಾ ಪಡೆ (ಆರ್ಪಿಎಫ್) ಸಿಬ್ಬಂದಿ ಪತ್ತೆ ಮಾಡಿ, ಕಣ್ಣೂರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಣ್ಣೂರು ಸಮೀಪದ ಶಿವಪುರದಲ್ಲಿರುವ ಪೋಕ್ಸೋ ಸಂತ್ರಸ್ತರ ಪುನರ್ವಸತಿ ಕೇಂದ್ರದ ನಾಲ್ವರು 16, 17, 18 ಮತ್ತು 19 ವರ್ಷದ ಬಾಲಕಿಯರು ಸೆಪ್ಟೆಂಬರ್ 4 ರಂದು ತಪ್ಪಿಸಿಕೊಂಡು ಬಂದಿದ್ದು, ತಿರುವನಂತಪುರಂ ಸೆಂಟ್ರಲ್- ಮತ್ತು ವೆರಾವಲ್ ವೀಕ್ಲಿ ಎಕ್ಸ್ಪ್ರೆಸ್ ರೈಲು ಹತ್ತಿದ್ದು, ಮುಂಬೈಗೆ ಟಿಕೇಟ್ ಮಾಡಿದ್ದರು. ಆದರೆ ಮೊಬೈಲ್ ಟ್ರೇಸ್ ಅಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಮೊಬೈಲ್ ರೈಲಿನಲ್ಲೇ ಬಿಟ್ಟು ಉಡುಪಿಯಲ್ಲಿ ಮಂಗಳವಾರ ಬೆಳಗ್ಗೆ ಇಳಿದ 5 ಮಂದಿ ನಂತರ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು.
ಈ ಬಗ್ಗೆ ಉಡುಪಿ ರೈಲು ನಿಲ್ದಾಣದಲ್ಲಿ ಆಟೋರಿಕ್ಷಾ ಚಾಲಕರಿಂದ ಮಾಹಿತಿ ಪಡೆದ ಆರ್ಪಿಎಫ್ ಅಧಿಕಾರಿಗಳು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಬೆಳಗ್ಗೆ 5.50ಕ್ಕೆ ರೈಲಿನಿಂದ ಇಳಿದ ಬಾಲಕಿಯರು ಮತ್ತು ಮಹಿಳೆ ಆಟೋರಿಕ್ಷಾ ನಿಲ್ದಾಣಕ್ಕೆ ತೆರಳಿದ್ದನ್ನು ಗಮನಿಸಿದ್ದಾರೆ.
ಈ ತಂಡ ಮುಂಬೈ ಅಥವಾ ಚೆನ್ನೆಗೆ ಹೋಗುವ ನಿಟ್ಟಿನಲ್ಲಿ ಮಧ್ಯಾಹ್ನ 1 ಗಂಟೆಗೆ ಉಡುಪಿ ರೈಲು ನಿಲ್ದಾಣಕ್ಕೆ ಮರಳಿತ್ತು. ಈ ಸಂದರ್ಭದಲ್ಲಿ 5 ಮಂದಿಯನ್ನೂ ವಶಕ್ಕೆ ಪಡೆದ ಆರ್ಪಿಎಫ್ ಅಧಿಕಾರಿಗಳು ವಿಚಾರಣೆ ನಡೆಸಿ, ಕೇರಳ ಪೊಲೀಸರಿಗೆ ಮಾಹಿತಿ ನೀಡಿದ್ದರು.