

* ಗಮನಸೆಳೆವ ಇತಿಹಾಸಿಕ ಅಮಾನಿಕೆರೆ
* ಕ್ರಿಕೆಟಿಗ ಕೆ.ಎಲ್.ರಾಹುಲ್ ಈ ಊರಿನವರು
ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ
ದೇಶ ವೈವಿಧ್ಯತೆಗೆ ಹೆಸರುವಾಸಿಗಿರುವಂತೆ ಮಾಗಡಿಯಿಂದ 30 ಕಿಮೀ ದೂರದಲ್ಲಿರುವ ಕಣ್ಣೂರು ಗ್ರಾಮವೂ ಚಾರಿತ್ರಿಕ, ಸಾಂಸ್ಕೃತಿಕ, ಐತಿಹಾಸಿಕವಾಗಿ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಹೊಂದಿದೆ.
ಕಣ್ವ ಮಹರ್ಷಿಗಳು ತಪಸ್ಸು ಮಾಡಿದ್ದರಿಂದ ಗ್ರಾಮಕ್ಕೆ ಕಣ್ವಪುರ ಎಂದು ಹೆಸರಾಯಿತು. ಕಾಲ ಕ್ರಮೇಣ ಕಣನೂರು, ಈಗ ಕಣ್ಣೂರು ಎಂದು ಕರೆಯಲಾಗುತ್ತಿದೆ. ಈ ಗ್ರಾಮ 700 ವರ್ಷದ ಇತಿಹಾಸ ಹೊಂದಿದೆ.
ಕಣ್ಣೂರು ಸಮೀಪದ ಅಮಾನಿಕೆರೆಯನ್ನು ದೊಡ್ಡಮಟ್ಟದಲ್ಲಿ ನಿರ್ಮಿಸುವ ವೇಳೆ ಕಣ್ವ ಮಹರ್ಷಿಗಳು ಐಕ್ಯವಾದ ಗದ್ದುಗೆ ಸ್ಥಳ ಮುಚ್ಚಿದೆ. ಇದನ್ನು ಗ್ರಾಮದ ಬಳಿ ಮರು ಪ್ರತಿಷ್ಠಾಪಿಸಲು ಗ್ರಾಮಸ್ಥರು ಮುಂದಾಗಿದ್ದಾರೆ.
ಕಣ್ವ ಮಹರ್ಷಿಗಳು 400 ವರ್ಷಗಳ ಹಿಂದೆಯೇ ಮಕ್ಕಳಿಗೆ ಶಿಕ್ಷಣ ನೀಡಲು ಗುರುಕುಲ ನಿರ್ಮಿಸಿದ್ದರು. ಗುರುಶಾಲೆ ಈಗ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಾಗಿದೆ. ಈ ಶಾಲೆಯಲ್ಲಿ ಕ್ರಿಕೆಟಿಗ ಕೆ.ಎಲ್.ರಾಹುಲ್ ತಂದೆ ಕೆ.ಎನ್.ಲೋಕೇಶ್ ವಿದ್ಯಾಭ್ಯಾಸ ಮಾಡಿರುವುದು ಗಮನಾರ್ಹ. ಅಂಗನವಾಡಿ, ಗ್ರಾಮ ಪಂಚಾಯಿತಿ, ಗ್ರಂಥಾಲಯ, ನ್ಯಾಯಬೆಲೆ ಅಂಗಡಿ, ಶ್ರೀಮಲ್ಲೇಶ್ವರ ಸ್ವಾಮಿ ದೇವಾಲಯ, ಪಟಾಲದಮ್ಮ ದೇಗುಲ ಹಾಗೂ ಗ್ರಾಮದೇವತೆ ದೇವಾಲಯ ಕಾಣಬಹುದಾಗಿದೆ.
ಕೆ.ಎಲ್.ರಾಹುಲ್ ತಾತ ಕೆ.ವಿ.ನಂಜಪ್ಪ ಹಾಗೂ ಆಲೂರು ಹನುಮಂತಪ್ಪ 1962ರಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದು, ಗೆದ್ದು ಸಚಿವರೂ ಆದ ಆಲೂರು ಹನುಮಂತರಾಯಪ್ಪ ಕೆ.ವಿ.ನಂಜಪ್ಪ ಅವರ ಮನೆಗೆ ಬಂದಾಗ ಗ್ರಾಮದ ಸಮೀಪ ಇದ್ದ ಚಿಕ್ಕಕೆರೆಯನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸುವ ಭರವಸೆ ನೀಡಿದ್ದು, ಆ ಮಾತನ್ನು ಉಳಿಸಿಕೊಂಡರು.
ಗ್ರಾಮದಲ್ಲಿ 900ಕ್ಕೂ ಹೆಚ್ಚು ಜನರಿದ್ದು, ಜೈನರು ಹೊರತು ಪಡಿಸಿ, ಉಳಿದ ಎಲ್ಲ ಜನಾಂಗದವರು ವಾಸಿಸುತ್ತಿದ್ದಾರೆ. ಈ ಗ್ರಾಮ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಅಡಕೆ, ತೆಂಗು, ಮಾವು, ರಾಗಿ ಪ್ರಮುಖ ಬೆಳೆಯಾಗಿವೆ. ಗ್ರಾಮದ ಸುತ್ತ ನಿರ್ಮಿಸಿದ್ದ ಕೋಟೆ ಕೆರೆಯಲ್ಲಿ ಮುಳುಗಿದೆ. ಗ್ರಾಮದಲ್ಲಿ ಸಣ್ಣಪುಟ ವ್ಯಾಜ್ಯಗಳು ನಡೆದರೆ ಹಿರಿಯ ಮುಖಂಡರ ಸಮ್ಮುಖದಲ್ಲಿ ಬಗೆಹರಿಸಲಾಗುತ್ತದೆ. ಹೆಚ್ಚಾಗಿ ಪೊಲೀಸ್ ಠಾಣೆ, ನ್ಯಾಯಾಲಯದ ಮೊರೆಗೆ ಹೋಗದಂತೆ ಇಂದಿಗೂ ಪಾಲಿಕೊಂಡು ಬಂದಿರುವ ಮಾದರಿ ಗ್ರಾಮವಾಗಿದೆ.
ಗ್ರಾಮದ ಕೆ.ವಿ.ಚಂದ್ರಶೇಖರ ಕಣನೂರು ಎಂಬುವರು ಅಮೆರಿಕದ ಮಿಚಿಗನ್ ಯೂನಿವರ್ಸಿಟಿಯಲ್ಲಿ ಕುಲಪತಿಗಳಾಗಿದ್ದು, ಇದೇ ಕುಟುಂಬದ 40 ಮಂದಿ ಅಮೆರಿಕದಲ್ಲಿ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಅಂತಾರಾಷ್ಟ್ರೀಯಮಟ್ಟದ ಕ್ರಿಕೆಟಿಗ ಕೆ.ಎಲ್.ರಾಹುಲ್, ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರೂ ಇದೇ ಗ್ರಾಮದವರು ಎಂಬುದು ವಿಶೇಷ.
ಸಾವಿರ ವರ್ಷಗಳ ಇತಿಹಾಸವಿರುವ ಮಕ್ಕಳ ದೇವರ ಮಠವನ್ನು ಚೋಳರ ಕಾಲದಲ್ಲಿ ನಿರ್ಮಿಸಲಾಗಿತ್ತು. ಮೈಸೂರು ಮಹಾರಾಜರ ಕುಟುಂಬದ ಮುಖ್ಯಸ್ಥರಿಗೆ ಕೊಳವೆ ರೋಗ ಕಾಣಸಿಕೊಂಡ ಹಿನ್ನೆಲೆಯಲ್ಲಿ ಕಣ್ಣೂರು ಸಮೀಪದ ರಾಮನಹಳ್ಳಿಯಲ್ಲಿ ನಾಟಿ ಔಷಧಿ ಪಡೆಯುವ ಸಲುವಾಗಿ ವಾರಗಟ್ಟಲೆ ತಂಗಲು ಕಣ್ಣೂರು ಮಠದಲ್ಲಿ ಆಶ್ರಯ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು ಅರಮನೆಯಿಂದ ಶ್ರೀಮಠಕ್ಕೆ 60ಕ್ಕೂ ಹೆಚ್ಚು ಎಕರೆ ಜಮೀನನ್ನು ಬಳುವಳಿಯಾಗಿ ನೀಡಿದ್ದಾರೆ.
ಈ ಬಗ್ಗೆ ಚಿತ್ರದುರ್ಗದ ಮುರುಘಾ ಮಠದ ಪುಸ್ತಕದಲ್ಲಿ ಉಲ್ಲೇಖವಿದೆ. ಮಠವನ್ನು ಇತ್ತೀಚೆಗೆ ಮೃತ್ಯುಂಜಯ ಸ್ವಾಮೀಜಿ ಜೀರ್ಣೋದ್ಧಾರಗೊಳಿಸಿದ್ದಾರೆ. ಮಠದ ಜಮೀನಿನಲ್ಲಿ ತೆಂಗಿನ ಗುಂಡಿ ತೆಗೆಯುವ ವೇಳೆ 600 ವರ್ಷಗಳ ಇತಿಹಾಸ ಇರುವ ಹಳೇ ಪೂಜಾ ಸಾಮಗ್ರಿಗಳು ಪತ್ತೆಯಾಗಿದ್ದವು.
ಗ್ರಾಮದ ಕೆ.ವಿ.ನಂಜಪ್ಪ ಸಹೋದರ ಕೆ.ವಿ.ಪುಟ್ಟಗಂಗಯ್ಯ ತುಮಕೂರಿನ ಮಹಾನಗರ ಪಾಲಿಕೆಯ ಅಧ್ಯಕ್ಷರಾಗಿದ್ದರು. ಆ ವೇಳೆ ರಾಷ್ಟ್ರಪತಿಯಾಗಿದ್ದ ವಿ.ವಿ.ಗಿರಿ ಅವರು ತುಮಕೂರಿನ ಅವರ ಮನೆಯಲ್ಲಿ ‘ಭೋಜನ ಸವಿದಿದ್ದರು. ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಈ ಗ್ರಾಮ ಅಚ್ಚುಮೆಚ್ಚಾಗಿತ್ತು.
ಗ್ರಾಮದ ಕೆ.ಆರ್.ಸುಬ್ಬಣ್ಣ ಅವರು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಅವರ ಮ್ಯಾನೇಜರ್ ಆಗಿದ್ದು, ಈಗ ಬೆಂಗಳೂರು, ದೆಹಲಿ, ಪಂಜಾಬ್ ಸೇರಿ ವಿವಿಧ ರಾಜ್ಯಗಳಲ್ಲಿ ಹೋಟೆಲ್ ಉದ್ಯಮ ನಡೆಸುತ್ತಾ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿದ್ದಾರೆ. ಜಯಶಂಕರ್ ಎಂಬುವರು ತಾಪಂ ಸದಸ್ಯರಾಗಿ, ಗ್ರಾಪಂ ಸೇರಿ ಸಂಘ, ಸಂಸ್ಥೆಗಳ ಅಧ್ಯಕ್ಷರಾಗಿ ಶಿಕ್ಷಣ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ಕೆ.ಎಸ್.ಜಗದೀಶ್ ಎಂಬುವರು ಗ್ರಾಪಂ ಅಧ್ಯಕ್ಷರಾಗಿ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದು, ಉದ್ಯಮಿಯಾಗಿದ್ದಾರೆ. ತ್ಯಾಗರಾಜು ಎಂಬುವರು ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ರಾಜ್ಯಮಟ್ಟದ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದಾರೆ.
ಗ್ರಾಮದಲ್ಲಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದ ಬಗ್ಗೆ ತಿಳಿದ ಗುಬ್ಬಿ ವೀರಣ್ಣ ಅವರು ಗ್ರಾಮದಲ್ಲಿ ಕಲಾ ಸಂಘಟನೆ ಮಾಡಿ, ಹೆಣ್ಣು ಮಕ್ಕಳಿಂದ ನಾಟಕ ಶಾಲೆ ಆರಂಭಿಸಿದ್ದರು. ಗ್ರಾಮದಲ್ಲಿ 8ನೇ ಶತಮಾನದ 10, 12 ವೀರಗಲ್ಲುಗಳು ಪತ್ತೆಯಾಗಿವೆ.
ಐತಿಹಾಸಿಕ, ಸಾಂಸ್ಕೃತಿಕ, ಪುರಾತನವಾದ ಈ ಗ್ರಾಮ, ಅಂತಾರಾಷ್ಟ್ರೀಯಮಟ್ಟದಲ್ಲಿ ಹೆಸರು ಗಳಿಸಿದೆ. ಮತಷ್ಟು ಅಭಿವೃದ್ಧಿಗೊಳಿಸಲು ಸರ್ಕಾರ ಮುಂದಾಗಿ, ಮಾದರಿ ಗ್ರಾಮವನ್ನಾಗಿ ಮಾಡಬೇಕು. ಚಂದ್ರಣ್ಣ, ಗ್ರಾಮದ ಹಿರಿಯ ಮುಖಂಡಕಣ್ಣೂರು ಗ್ರಾಮ ತಾಲೂಕಿನಲ್ಲೇ ಪ್ರಸಿದ್ಧಿ ಹೊಂದಿದ್ದು, 2023ರಲ್ಲಿ ಕಣ್ಣೂರು ಗ್ರಾಪಂಗೆ ಗಾಂಧಿಗ್ರಾಮ ಪ್ರಶಸ್ತಿ ಲಭಿಸಿದೆ. ಈ ಗ್ರಾಮ ಪ್ರವಾಸಿ ತಾಣವಾಗ ಎಲ್ಲ ಅರ್ಹತೆ ಹೊಂದಿದ್ದು, ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಪ್ರಭದೇವರು ನಿವೃತ್ತ ಶಿಕ್ಷಕ