

ಮಂಡ್ಯ: ಜೈಲಿನಲ್ಲಿರುವ ಕೈದಿಗಳಿಗೂ ಹಕ್ಕುಗಳಿವೆ. ಆ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಬಿ.ಜಿ.ರಮಾ ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಜಿಪಂ, ಪೊಲೀಸ್ ಇಲಾಖೆ, ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಾನೂನು ಸೇವೆಗಳ ದಿನ, ‘ಹಕ್ ಹಮಾರಾ ಬಿ ಹೈ’ ಕಾನೂನು ಅರಿವು ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿ ವರ್ಷ ನ.9ರಂದು ಕಾನೂನು ಸೇವೆಗಳ ದಿನವನ್ನು ಆಚರಣೆ ಮಾಡುತ್ತೇವೆ. ಸಾರ್ವಜನಿಕರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಕಾನೂನು ಸೇವೆಗಳ ದಿನಾಚರಣೆಯ ಮುಖ್ಯ ಉದ್ದೇಶ. ಕಾನೂನಿನ ಅರಿವು ಪ್ರತಿ ಹಳ್ಳಿಯ ಸಾರ್ವಜನಿಕರಿಗೂ ಸಹ ತಿಳಿಯಬೇಕು ಎಂಬ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೇವೆ. ಈ ದಿಸೆಯಲ್ಲಿ ಜೈಲಿನಲ್ಲಿರುವ ಕೈದಿಗಳ ಹಕ್ಕುಗಳ ಕುರಿತು ಅರಿವು ಮೂಡಿಸುವುದು. ಜತೆಗೆ ಅವರ ಹಕ್ಕುಗಳು ರಕ್ಷಣೆ ಅಥವಾ ಉಲ್ಲಂಘನೆ ಆಗುತ್ತಿರುವ ಬಗ್ಗೆ ತಿಳಿಸುವುದು ಮೂಲ ಉದ್ದೇಶ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಳಿನಿ ಕುಮಾರಿ, ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ, ಜಿಲ್ಲಾ ಎಸ್ಪಿ ಎನ್.ಯತೀಶ್, ಮಿಮ್ಸ್ ನಿರ್ದೇಶಕ ಡಾ.ಮಹೇಂದ್ರ, ವಕೀಲರ ಸಂಘದ ಅಧ್ಯಕ್ಷ ರಾಜೇಂದ್ರ, ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ಬಿ.ಎಂ.ಮಹೇಶ್ ಇತರರಿದ್ದರು.