ಆರ್ಯವೈಶ್ಯರ ಕುಲದೇವತೆ ಕನ್ನಿಕಾಪರಮೇಶ್ವರಿ

ಆರ್ಯವೈಶ್ಯರ ಕುಲದೇವತೆ ಕನ್ನಿಕಾಪರಮೇಶ್ವರಿ
Published on

ಕೆ.ಎಸ್.ನಾಗೇಶ್ ಕುಶಾಲನಗರ
ಇಲ್ಲಿನ ರಥಬೀದಿಯಲ್ಲಿರುವ ಕನ್ನಿಕಾಪರಮೇಶ್ವರಿ ದೇವಿಯನ್ನು ಆರ್ಯವೈಶ್ಯರು ಕುಲದೇವತೆ ಎಂದು ಪೂಜಿಸುತ್ತಾರೆ. ಈ ದೇವಾಲಯವನ್ನು ಕುಶಾಲನಗರದ ಗೋಲ್ಡನ್ ಟೆಂಪಲ್ ಎಂದು ಕೂಡ ಕರೆಯಲಾಗುತ್ತದೆ.

ಕನ್ನಿಕಾಪರಮೇಶ್ವರಿಯನ್ನು ವಾಸವಿ ಮಾತೆ ಎಂದು ಕೂಡ ಕರೆಯಲಾಗುತ್ತದೆ. ದೇವಾಲಯದ ಒಳಗೆ ಪ್ರವೇಶ ಮಾಡುವಾಗಲೇ ಒಂದು ರೀತಿಯ ಪಾಸಿಟಿವ್ ಎನರ್ಜಿ ಅನುಭವ ಎಂಬುದು ಭಕ್ತರ ಅನಿಸಿಕೆಯಾಗಿದೆ. ದೇವಿಯನ್ನು ಭಕ್ತಿಯಿಂದ ನಮಿಸಿದರೆ ಬೇಡಿಕೆಗಳನ್ನು ಈಡೆರಿಸುತ್ತಾಳೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ.

ಸಂತಾನ ಭಾಗ್ಯ, ಆರ್ಥಿಕ ಸಂಕಷ್ಟ, ಮದುವೆ ಸಮಸ್ಯೆ, ಶಿಕ್ಷಣ, ಉದ್ಯೋಗ ಇನ್ನಿತರ ಬೇಡಿಕೆ ಈಡೇರಿಕೆಗಾಗಿ ಭಕ್ತರು ಹರಕೆ ಹೊರುವುದನ್ನು ಕಾಣಬಹುದಾಗಿದೆ. ಇತ್ತೀಚೆಗೆ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ತಮ್ಮ ಸ್ನೇಹಿತರ ಸಲಹೆ ಮೇರೆಗೆ ಇಲ್ಲಿಗೆ ಬಂದು ಹರಕೆ ಹೊತ್ತ ಕೆಲವೇ ದಿನಗಳಲ್ಲಿ ತಮ್ಮ ಸಮಸ್ಯೆಗಳು ಬಗೆಹರಿದವು ಎಂದು ಹೇಳಿ ಹರಕೆ ತೀರಿಸಿರುವ ಉದಾಹರಣೆಯಿದೆ.

ದೇವಾಲಯದಲ್ಲಿ ಗಣಪತಿ, ನಗರೇಶ್ವರ, ಶ್ರೀ ಮಹಾವಿಷ್ಣು, ಬಾಲ ಸುಹ್ರಮಣ್ಯ ಮತ್ತು ನವಗ್ರಹ ದೇವರನ್ನು ನಿತ್ಯ ಪೂಜಿಸಲಾಗುತ್ತದೆ. ಕನ್ನಿಕಾಪರಮೇಶ್ವರಿಗೆ ಶುಕ್ರವಾರ ಅತ್ಯಂತ ಪ್ರಿಯವಾದ ದಿನ ಎಂದು ಹೇಳಲಾಗುತ್ತದೆ. ಪ್ರತಿ ಶುಕ್ರವಾರ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ.

ಶ್ರಾವಣ ಮಾಸ, ವೈಶಾಖ ಮಾಸ, ಭಾದ್ರಪದ ಮಾಸ, ಆಷಾಢ ಮಾಸ, ಧನುರ್ಮಾಸ ಮತ್ತು ಕಾರ್ತಿಕ ಮಾಸಗಳಲ್ಲಿ ದೇವರಿಗೆ ಪ್ರಿಯವಾದ ದಿನ. ಆ ದಿನಗಳಲ್ಲಿ ಭಕ್ತರು ಬೇಡಿಕೊಂಡ ಇಷ್ಟಾರ್ಥಗಳನ್ನು ಶೀಘ್ರವಾಗಿ ಕರುಣಿಸುತ್ತಾಳೆ. ಈ ಮಾಸಗಳಲ್ಲಿ ಒಂದು ಸಾರಿ ಪ್ರಾರ್ಥನೆ ಮಾಡಿದರೆ ನೂರು ಸಲ ಪ್ರಾರ್ಥನೆ ಮಾಡಿದ ಫಲ ದೊರೆಯುತ್ತದೆ ಎನ್ನುವ ನಂಬಿಕೆ ಇದೆ.

ಶ್ರಾವಣ ಮಾಸದ ಪ್ರತಿ ಬುಧವಾರ ಮತ್ತು ಶನಿವಾರ ಶನಿ ಕಥೆ ಆರಾಧನೆ ನಡೆಯುತ್ತದೆ. ನವರಾತ್ರಿಯಲ್ಲಿ 10 ದಿನವೂ ದೇವಿಯನ್ನು ಬೇರೆ ಬೇರೆ ಅಲಂಕಾರದೊಂದಿಗೆ ಪೂಜಿಸಲಾಗುತ್ತದೆ. ಕಾರ್ತಿಕ ಮಾಸದಲ್ಲಿ ಒಂದು ತಿಂಗಳು ಪೂರ್ತಿ ದೀಪೋತ್ಸವ ಮಾಡಲಾಗುತ್ತದೆ. ಭಾದ್ರಪದ ಮಾಸದಲ್ಲಿ 101ಗಣಪತಿಯನ್ನು ಆರಾಧಿಸುತ್ತೇವೆ. ಧನುರ್ಮಾಸದಲ್ಲೂ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಒಟ್ಟಿನಲ್ಲಿ ಈ ಸಾನ್ನಿಧ್ಯದಲ್ಲಿ ಎಲ್ಲ ದೇವತೆಗಳು ನೆಲೆಸಿದ್ದಾರೆ ಎನ್ನುತ್ತಾರೆ ಪ್ರಧಾನ ಅರ್ಚಕ ಗಿರೀಶ್ ಭಟ್.

ಮನೆ ದೇವರ ಸನ್ನಿಧಿಗೆ ತೆರಳಲು ಸಾಧ್ಯವಾಗದವರು ಶ್ರೀ ವಾಸವಿ ಮಾತೆಯ ಅಧೀನಕ್ಕೆ ಬಂದು ಅನುಗ್ರಹ ಮಾಡು ಎಂದು ಕೇಳಿಕೊಂಡರೆ ಪ್ರಾರ್ಥನೆ ಸಲ್ಲುತ್ತದೆ. ಆಕೆ ಸೂತ್ರಧಾರಿ ಎನ್ನುವ ನಂಬಿಕೆ ಹಲವರಲ್ಲಿ ಇದೆ. ವಿಶೇಷವಾಗಿ ಆರ್ಯವೈಶ್ಯ ಕುಲದವರು ದೇವಿಯ ಪ್ರಸಾದ ತೆಗೆದುಕೊಂಡೆ ತಮ್ಮ ಎಲ್ಲ ಶುಭ ಕಾರ್ಯಗಳು ಯಶಸ್ವಿಯಾಗುವುದನ್ನು ಕಾಣಬಹುದಾಗಿದೆ.

1947ರಲ್ಲಿ ಸ್ಥಾಪನೆ: ಶ್ರೀಮದ್ ಕನ್ನಿಕಾಪರಮೇಶ್ವರಿ ದೇವಸ್ಥಾನವು 1947ರ ಮೇ ತಿಂಗಳಲ್ಲಿ ಸ್ಥಾಪನೆಯಾಗಿದೆ. ಆರ್ಯವೈಶ್ಯ ಮಂಡಳಿಯ ಸ್ಥಾಪಕ ಅಧ್ಯಕ್ಷರಾದ್ದ ಮೈಲಾರ ಶೆಟ್ರು ಮುಂದಾಳತ್ವದಲ್ಲಿ ದೇವಾಲಯ ನಿರ್ಮಿಸಲಾಯಿತು. 1997ರಲ್ಲಿ ಜರುಗಿದ ಸುವರ್ಣ ಮಹೋತ್ಸವ ಅಂಗವಾಗಿ ಬೃಹತ್ ರಾಜಗೋಪುರ ನಿರ್ಮಾಣ ಮಾಡಲಾಯಿತು. ಬಿ.ಆರ್.ನಾಗೇಂದ್ರ ಪ್ರಸಾದ್ ಅಧ್ಯಕ್ಷತೆಯಲ್ಲಿ 2014 ರಲ್ಲಿ ದೇವಸ್ಥಾನದ ಮರುನಿರ್ಮಾಣವಾಗಿ ಗೋಲ್ಡನ್ ಟೆಂಪಲ್ ಎನ್ನುವ ಖ್ಯಾತಿಯನ್ನು ಪಡೆಯಿತು. ಈ ದೇವಸ್ಥಾನ ಆರ್ಯವೈಶ್ಯ ಜನಾಂಗ ಮತ್ತು ಸಾರ್ವಜನಿಕರ ಬದುಕಿಗೆ ಮುನ್ನುಡಿಯಾಗಿ ಧಾರ್ಮಿಕ ಚಟುವಟಿಕೆಗಳಲ್ಲಿ ಶ್ರದ್ಧಾ ಕೇಂದ್ರವಾಗಿದೆ ಎಂದು ಆರ್ಯವೈಶ್ಯ ಮಹಿಳಾ ಮಂಡಳಿಯ ಮಾಜಿ ಅಧ್ಯಕ್ಷೆ ಆಶಾ ಅಶೋಕ ಹೇಳುತ್ತಾರೆ.

ವಾಸವಿ ಜಯಂತಿ: ಪ್ರತಿ ವರ್ಷ ಮೇ ತಿಂಗಳಲ್ಲಿ ದೇವಿಯ ಜಯಂತಿ ಆಚರಣೆ ಮಾಡಲಾಗುತ್ತದೆ. ಅಂದು ಆರ್ಯವೈಶ್ಯ ಜನಾಂಗದವರು ವಿವಿಧ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಂಡು ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ಧಾರ್ಮಿಕ ಚಿಂತನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಯುವ ಜನಾಂಗಕ್ಕೆ ಆಚಾರ, ವಿಚಾರಗಳ ಬಗ್ಗೆಯೂ ಕಾರ್ಯಕ್ರಮ ಆಯೋಜಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net