

ಮುದಗಲ್: ಸಮೀಪದ ಕನ್ನಾಪುರಹಟ್ಟಿಯ ಆರಾಧ್ಯದೈವ ಕೂಡಲ ಸಂಗಮನಾಥನ ಜಾತ್ರೋತ್ಸವ ಸೋಮವಾರ ಸಂಪನ್ನಗೊಂಡಿತು. ಜಾತ್ರೆ ನಿಮಿತ್ತ ದೇವಸ್ಥಾನದ ಈಶ್ವರ ಮೂರ್ತಿಗೆ ಬೆಳಗ್ಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಭಜನೆ, ಅಲಂಕಾರ ಸೇವೆ ನೆರವೇರಿಸಲಾಯಿತು.
ನಂತರ ಗ್ರಾಮದ ಮೂಲಕ ಮಹಿಳೆಯರು ಕಳಸಗಳನ್ನು ಹಿಡಿದು ಬಾಜಾ ಭಜಂತ್ರಿ ಸಮೇತ ದೇವಸ್ಥಾನದವರೆಗೆ ಮೆರವಣಿಗೆ ನಡೆಸಿದರು. ಮುದಗಲ್, ಆಶಿಹಾಳ, ಖೈರವಾಡಗಿ, ಬೊಮ್ಮನಾಳ, ಬಯ್ಯಪುರ ಹಾಗೂ ಸುತ್ತಲಿನ ಗ್ರಾಮದ ಭಕ್ತರು ಇಷ್ತಾರ್ಥ ಸಿದ್ಧಿಗೆ ಹಣ್ಣು, ಹೂ, ಕಾಯಿ ಸಮರ್ಪಿಸಿ ಪ್ರಾರ್ಥಿಸಿದರು.
ನಂತರ ಕಲಶಾರೋಹಣ ಹಾಗೂ ಸಂಗಮನಾಥನ ದೇಗುಲದ ಪ್ರಾಂಗಣದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ, ಎಂಎಲ್ಸಿ ಶರಣಗೌಡ ಬಯ್ಯಪುರ, ಪ್ರಮುಖರಾದ ಶರಣಬಸವ ವ್ಯಾಕರನಾಳ, ಅಶೋಕಗೌಡ ಪಾಟೀಲ್, ಮಹಾಂತೇಶ ಪಾಟೀಲ್, ಸುರೇಶ ಸೇಠ, ನಾಗನಗೌಡ ತುರಡಗಿ, ತಮ್ಮಣ್ಣ ಗುತ್ತೇದಾರ, ಪರಮೇಶ ಕನ್ನಾಪೂರಹಟ್ಟಿ ಇತರರಿದ್ದರು.