

ಮುದ್ದೇಬಿಹಾಳ: ನಗರದಲ್ಲಿ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಕ್ಷರ ಜಾತ್ರೆಗೆ ಕ್ಷಣಗಣನೆ ಶುರುವಾಗಿದೆ. ನಗರದ ಪ್ರಮುಖ ರಸ್ತೆಗಳ ವಿಭಜಕದಲ್ಲಿರುವ ವಿದ್ಯುತ್ ಕಂಬಗಳನ್ನು ಕನ್ನಡ ಬಾವುಟಗಳಿಂದ, ಬಸವೇಶ್ವರ, ಅಂಬೇಡ್ಕರ್ ವೃತ್ತಗಳನ್ನು, ಬಸ್ ನಿಲ್ದಾಣ ಮುಂದಿನ ರಸ್ತೆಯಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ಸರ್ವಾಧ್ಯಕ್ಷ ಅಶೋಕ ಮಣಿ ಮೆರವಣಿಗೆ ಸಂಚರಿಸುವ ಬನಶಂಕರಿ ದೇವಸ್ಥಾನದಿಂದ ಸಿದ್ಧೇಶ್ವರ ಸ್ವಾಮೀಜಿ ವೇದಿಕೆಯವರೆಗೆ ರಸ್ತೆ ಸ್ವಚ್ಛಗೊಳಿಸಿ, ಕನ್ನಡಾಭಿಮಾನಿಗಳು ರಂಗೋಲಿ ಹಾಕಿ ಸ್ವಾಗತಿಸಲು ವ್ಯವಸ್ಥೆ ಮಾಡಿದ್ದಾರೆ. ವಿಬಿಸಿ ಪ್ರೌಢಶಾಲೆ ಮೈದಾನದಲ್ಲಿ ಈ ಭಾಗದ ಆಧುನಿಕ ಅತ್ತಿಮಬ್ಬೆ ಎಂದೇ ಹೆಸರಾಗಿರುವ ಮಾತೋಶ್ರೀ ಗಂಗಮ್ಮ ವೀರಪ್ಪ ಚಿನಿವಾರ ಹೆಸರಿನಲ್ಲಿ ಪ್ರಧಾನ ವೇದಿಕೆ ಸಿದ್ದವಾಗಿದೆ.
ಮುಖ್ಯ ಮಹಾದ್ವಾರಕ್ಕೆ ವೈರಾಗ್ಯ ಚಕ್ರವರ್ತಿ ಘನಮಠ ಶಿವಯೋಗಿಗಳ, 1ನೇ ಮಹಾದ್ವಾರಕ್ಕೆ ಶರಣೆ ತಂಗಡಗಿ ನೀಲಮ್ಮನವರ, 2ನೇ ಮಹಾದ್ವಾರಕ್ಕೆ ಬಸರಕೋಡದ ಪವಾಡ ಬಸವೇಶ್ವರರ, 3ನೇ ಮಹಾದ್ವಾರಕ್ಕೆ ವೈದ್ಯರತ್ನ ಡಾ. ಆರ್.ಆರ್. ಪದಕಿರವರ, ದಾಸೋಹ ಮನೆಗೆ ನಾಲತವಾಡ ಶ್ರೀ ವೀರೇಶ್ವರ ಶರಣರ, ಮಹಾಮಂಟಪಕ್ಕೆ ಮಲಿಕಸಾಬ ನದಾ ಅಮರಗೋಳರವರ, ಪುಸ್ತಕ ಮಳಿಗೆಗೆ ಪ್ರೊ. ಎ.ಎಸ್. ಹಿಪ್ಪರಗಿರವರ ಹೆಸರಿಟ್ಟು ಗೌರವ ಸಲ್ಲಿಸಲಾಗಿದೆ.
ಬೆಳಗ್ಗೆ 7.30ಕ್ಕೆ ಶಾಸಕ ಸಿ.ಎಸ್. ನಾಡಗೌಡ ರಾಷ್ಟ್ರಧ್ವಜ, ರಾಜು ಕಲಬುರಗಿ ನಾಡಧ್ವಜ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಪರಿಷತ್ತಿನ ಧ್ವಜಾರೋಹಣ ನೆರವೇರಿಸುವರು.
ಸಿ.ಬಿ. ಅಸ್ಕಿ, ಸಂಗೀತಾ ನಾಡಗೌಡ ಪ್ರಧಾನ ವೇದಿಕೆ, ಮಲ್ಲಿಕಾರ್ಜುನ ಮದರಿ ಮಹಾದ್ವಾರಗಳ, ಸಿ.ಪಿ. ಸಜ್ಜನ ದಾಸೋಹ ಮನೆ, ಬಿ.ಜಿ. ಮಠ ಮಹಾಮಂಟಪ, ಆನಂದ ಬಿರಾದಾರ ಪುಸ್ತಕ ಮಳಿಗೆ ಉದ್ಘಾಟಿಸುವರು.
8.30ಕ್ಕೆ ಬನಶಂಕರಿ ದೇವಸ್ಥಾನದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಗೆ ಬಸವರಾಜ ಮೋಟಗಿ, ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ ಅಧ್ಯಕ್ಷತೆಯಲ್ಲಿ, ಓಂಶಾಂತಿಯ ರೇಣುಕಾ ಅಕ್ಕನವರ ಸಾನ್ನಿಧ್ಯದಲ್ಲಿ ಚಾಲನೆ ನೀಡುವರು.
10.30ಕ್ಕೆ ಪ್ರಧಾನ ವೇದಿಕೆಯಲ್ಲಿ ಚನ್ನವೀರ ಶಿವಾಚಾರ್ಯರ, ಖಾರಿ ಮೊಹಮ್ಮದ ಇಸಾಕ ಮಾಗಿ ಸಾನಿಧ್ಯದಲ್ಲಿ ಶಾಸಕ ಸಿ.ಎಸ್. ನಾಡಗೌಡ ಸಮ್ಮೇಳನ ಉದ್ಘಾಟಿಸುವರು. ಸಚಿವ ಎಂ.ಬಿ. ಪಾಟೀಲ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಸಚಿವ ಶಿವಾನಂದ ಪಾಟೀಲ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಸಚಿವ ಶಿವರಾಜ ತಂಗಡಗಿ ವಿಶೇಷ ಆಹ್ವಾನಿತರಾಗಿರುವರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಧ್ಯಕ್ಷತೆ ವಹಿಸುವರು. ಪ್ರೊ. ಬಿ.ಎಂ. ಹಿರೇಮಠ ಸೇರಿ ಗಣ್ಯರು ಉಪಸ್ಥಿತರಿರುವರು.
ಮಧ್ಯಾಹ್ನ 12.30ಕ್ಕೆ ವಚನಗೋಷ್ಠಿ, ಪುಸ್ತಕ ಲೋಕಾರ್ಪಣೆ, ಪುರಸಭೆ ಸದಸ್ಯರಿಗೆ ಸನ್ಮಾನ, 2ಕ್ಕೆ ಕವಿಗೋಷ್ಠಿ, 4ಕ್ಕೆ ಜಾನಪದ ಗೋಷ್ಠಿ, ಪುಸ್ತಕ ಲೋಕಾರ್ಪಣೆ, 5.30ಕ್ಕೆ ಕರ್ನಾಟಕ ಸುವರ್ಣ ಸಂಭ್ರಮ-50ರ ನಿಮಿತ್ತ ಕಸಾಪದಿಂದ ವಿಶೇಷ ಗೌರವ ಪುರಸ್ಕಾರ, ದಾನಿಗಳಿಗೆ, ಕಸಾಪ ಜಿಲ್ಲಾ ತಾಲೂಕು, ವಲಯ ಪದಾಧಿಕಾರಿಗಳಿಗೆ ಸನ್ಮಾನ, 6.15ಕ್ಕೆ ಬಹಿರಂಗ ಅಧಿವೇಶನ, 6.30ಕ್ಕೆ ರೇವಣಸಿದ್ಧೇಶ್ವರ ಶಾಂತಮಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಉಪಸ್ಥಿತಿಯಲ್ಲಿ ಸಮಾರೋಪ, ಸಂಜೆ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.
ಮುದ್ದೇಬಿಹಾಳದಲ್ಲಿ ಇದುವರೆಗೆ 3 ಜಿಲ್ಲಾ, 4 ತಾಲೂಕು ಸಮ್ಮೇಳನ ಯಶಸ್ವಿಯಾಗಿ ನಡೆದಿವೆ. ಇದೀಗ 8ನೇ ಬಾರಿ ಜನ ಕನ್ನಡಮ್ಮನ ತೇರನೆಳೆಯಲು ಸಜ್ಜಾಗಿದ್ದಾರೆ.
ಜಿಲ್ಲಾ ಮಟ್ಟದ ಸಮ್ಮೇಳನ: 1990ರ ಮೇ 7, 8 ರಂದು 5ನೇ ಜಿಲ್ಲಾ ಸಮ್ಮೇಳನಕ್ಕೆ ಶಿವರಾಮ ಕಾರಂತರು ಉದ್ಘಾಟಕರಾಗಿದ್ದು ಶಂ.ಗು. ಬಿರಾದಾರ, 2006ರ ಜನವರಿ 7, 8 ರಂದು 9ನೇ ಜಿಲ್ಲಾ ಸಮ್ಮೇಳನಕ್ಕೆ ಬರಗೂರು ರಾಮಚಂದ್ರಪ್ಪನವರು ಉದ್ಘಾಟರಾಗಿದ್ದು ಪ್ರೊ. ಎ.ಎಸ್. ಹಿಪ್ಪರಗಿ, 2015ರ ಜನೇವರಿ 22, 23ರಂದು 14ನೇ ಜಿಲ್ಲಾ ಸಮ್ಮೇಳನಕ್ಕೆ ಮಕ್ಕಳ ಸಾಹಿತಿ ಕಂಚ್ಯಾಣಿ ಶರಣಪ್ಪನವರು ಸರ್ವಾಧ್ಯಕ್ಷರಾಗಿದ್ದರು.
ತಾಲೂಕು ಮಟ್ಟದ ಸಮ್ಮೇಳನ: 20.8.2011ರಂದು ತಾಳಿಕೋಟೆಯಲ್ಲಿ ನಡೆದ ಪ್ರಥಮ ತಾಲೂಕು ಸಮ್ಮೇಳನಕ್ಕೆ ಮುದ್ದೇಬಿಹಾಳದ ಹಿರಿಯ ಸಾಹಿತಿ ಪ್ರೊ. ಬಿ.ಎಂ. ಹಿರೇಮಠ, 21.2.2014ರಲ್ಲಿ ಮುದ್ದೇಬಿಹಾಳದಲ್ಲಿ ನಡೆದ ಎರಡನೇ ಸಮ್ಮೇಳನಕ್ಕೆ ಅಮರಗೋಳದ ಮಲಕಣ್ಣ (ಮಲಿಕಸಾಬ) ನದಾ, 8.3.2017ರಂದು ನಾಲತವಾಡದಲ್ಲಿ ನಡೆದ ಮೂರನೇ ಸಮ್ಮೇಳನಕ್ಕೆ ತಾಳಿಕೋಟೆಯ ಚಂದ್ರೇಗೌಡ ಕುಲಕರ್ಣಿ, 31.7.2018ರಂದು ಢವಳಗಿಯಲ್ಲಿ ನಡೆದ ನಾಲ್ಕನೇ ಸಮ್ಮೇಳನಕ್ಕೆ ನಾಲತವಾಡದ ಚಂದ್ರಶೇಖರ ಹಿರೇಮಠ ಸರ್ವಾಧ್ಯಕ್ಷರಾಗಿದ್ದರು.