

ಮಡಿಕೇರಿ: ಹೃದಯದ ಭಾವ ಮತ್ತು ಭಾವನೆಗಳಿಂದ ಕನ್ನಡಿಗರು ಒಂದಾಗಬೇಕು ಎಂದು ಕಾವೇರಿ ವಾಹನ ಮಾಲಿಕರ ಮತ್ತು ಚಾಲಕರ ಸಂಘದ ಸಲಹೆಗಾರ ತೆನ್ನಿರ ಮೈನ ಕರೆ ನೀಡಿದರು.
ಮಡಿಕೇರಿಯ ಕಾವೇರಿ ವಾಹನ ಮಾಲಿಕರ ಮತ್ತು ಚಾಲಕರ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕರ್ನಾಟಕ ಭೌಗೋಳಿಕವಾಗಿ ಬೀದರ್‌ನಿಂದ ಚಾಮರಾಜನಗರವರೆಗೆ ಬಳ್ಳಾರಿಯಿಂದ ಉತ್ತರ ಕನ್ನಡದವರೆಗೆ ಒಂದಾಗಿದೆ. ಅದೇ ರೀತಿ ಹೃದಯದ ಭಾವ ಮತ್ತು ಭಾವನೆಗಳಿಂದ ಕನ್ನಡಿಗರು ಒಂದಾಗಬೇಕು. ೧೯೫೬ ನ೧ ರಂದು ಕನ್ನಡ ಪರ ಹೋರಾಟಗಾರರು ಮತ್ತು ಹಿರಿಯರ ಪ್ರಯತ್ನದ ಫಲವಾಗಿ ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮೈಸೂರು ಪ್ರಾಂತ್ಯ, ಕೊಡಗು ಪ್ರಾಂತ್ಯ ಸೇರಿದಂತೆ ಅನೇಕ ಭಾಗಗಳಾಗಿದ್ದ ಕರ್ನಾಟಕ ಏಕೀಕರಣವಾಯಿತು. ಈ ದಿನದ ಸವಿ ನೆನಪಿಗಾಗಿ ಪ್ರತಿಯೊಬ್ಬ ಕನ್ನಡಿಗರು ರಾಜ್ಯೋತ್ಸವ ಆಚರಿಸುತ್ತಾರೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎ.ಸಿ.ಲೋಕೇಶ್, ಕನ್ನಡಿಗರೆಲ್ಲರೂ ಸಾಮೂಹಿಕವಾಗಿ ಆಚರಿಸುವ ಹಬ್ಬ ಕನ್ನಡ ರಾಜ್ಯೋತ್ಸವ ಆಗಿದ್ದು ಇಂದು ನಮ್ಮ ಹೆಮ್ಮೆಯ ದಿನ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಜಫ್ರುಲ್ಲ, ಮಾಜಿ ಅಧ್ಯಕ್ಷ ಬದ್ದಂಜೆಟ್ಟಿರ ಜೈ ಜಗದೀಶ್, ಪ್ರಧಾನ ಕಾರ್ಯದರ್ಶಿ ಕುಯ್ಯಮುಡಿ ರಾಜೇಶ್, ಸದಸ್ಯರಾದ ರಫೀಕ್, ಸಂತೋಷ್, ಆನಂದ, ಸುಂದರ ಬಂಗೇರ, ಯೋಗೇಶ್ ಶೆಟ್ಟಿ, ಸೇರಿದಂತೆ ಸ್ಥಳೀಯರು ಭಾಗವಹಿಸಿದ್ದರು.