ಕನ್ನಡಿಗರು ಭಾವನಾತ್ಮಕವಾಗಿ ಒಂದಾಗಬೇಕು: ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ

9
Published on

ಮೈಸೂರು: ವರ್ತಮಾನದ ಸಂಗತಿಗಳಿಗೆ ನಾವು ಹೆಚ್ಚು ಆದ್ಯತೆ ಕೊಡಬೇಕು. ಪರಂಪರೆಯನ್ನು ಕಟ್ಟಿಕೊಳ್ಳುವಲ್ಲಿ ಕನ್ನಡಿಗರ ಪಾತ್ರ ಹಿರಿದಾಗಿರಬೇಕು ಎಂದು ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.

ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗವು ಶನಿವಾರ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಎಂದು ಮರುನಾಮಕರಣ ಮಾಡಿ 50 ವರ್ಷ ಕಳೆದಿದ್ದು, ಒಕ್ಕೊರಲಿನಿಂದ ನಾವು ಕನ್ನಡಿಗರೆಂದು ಹೆಮ್ಮೆಯಿಂದ ಹೇಳಬೇಕು. ಹೊಸ ಇತಿಹಾಸವನ್ನು ಕಟ್ಟುವಲ್ಲಿ ಕನ್ನಡಿಗರು ಮುನ್ನಡೆಯಬೇಕು. ವರ್ತಮಾನದ ಸಂಗತಿಗಳಿಗೆ ನಾವು ಹೆಚ್ಚು ಆದ್ಯತೆ ಕೊಡಬೇಕು. ಪರಂಪರೆಯನ್ನು ಕಟ್ಟಿಕೊಳ್ಳುವಲ್ಲಿ ಕನ್ನಡಿಗರ ಪಾತ್ರ ಹಿರಿದಾಗಿರಬೇಕು ಎಂದರು.

ರಾಜಶಾಹಿಗಳು ಪರಂಪರೆಯನ್ನು ಕಸಿಕಟ್ಟುವ ಪ್ರಯತ್ನ ಮಾಡಿ ಯಶಸ್ವಿಯಾದರು. ಅದು ವಿವಿಧ ಹಬ್ಬಗಳಾಗಿ ನಮ್ಮಲ್ಲಿ ಆಚರಣೆಗಳಾದವು. ಮನೆಯೊಳಗಿನ ಕಾರ್ಯವಾಯಿತು. ಆದರೆ ಸರ್ಕಾರಗಳು ಇತ್ತೀಚೆಗೆ ನಡೆಯುತ್ತಿರುವ ಮನೆಯ ಹೊರಗಿನ ಕಾರ್ಯಗಳು ಕೇವಲ ಆಚರಣೆಯಾಗಿ ಉಳಿದಿವೆ. ಪರಂಪರೆಯನ್ನು ಕಸಿಕಟ್ಟುವ ಮನೆಯೊಳಗಿನ ಕಾರ್ಯವನ್ನು ಮಾಡಬೇಕು. ತನ್ನದೇ ಭಾಷೆ, ಸ್ವನಾಡು, ಸ್ವಧರ್ಮವನ್ನು ಕಟ್ಟಿಕೊಳ್ಳುವುದರಿಂದ ನಾವೆಲ್ಲರೂ ಒಂದೇ ಎಂಬ ಐಕ್ಯತೆಯ ಭಾವನೆ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯೋತ್ಸವ ಎಂಬುದು ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಬಾರದು. ಹಾಗೆಯೇ, ಕೇವಲ ಆಚರಣೆಯಾಗಬಾರದು. ನಮ್ಮ ಮಾತೃಭಾಷೆಯ ಬಗ್ಗೆ ಅಭಿಮಾನವಿರಬೇಕು. ಕನ್ನಡ ಎದೆಯಾಳಾದ ಧ್ವನಿಯಾಗಬೇಕು. ಕೊನೆ ಪಕ್ಷ ತಮ್ಮ ಹೆಸರು, ಸಹಿಯನ್ನು ಕನ್ನಡದಲ್ಲಿ ಮಾಡಬೇಕು ಎಂದು ಹೇಳಿದರು.

ಮೈಸೂರನ್ನು ಮೊದಲ ಮಹಿಷ ಮಂಡಲ, ವಿಶಾಲ ಮೈಸೂರು, ಮೈಸೂರು ರಾಜ್ಯ ಎಂದು ಕರೆಯುತ್ತಿದ್ದರು. ಕರ್ನಾಟಕ ಎಂಬುದು ಜನಪ್ರತಿನಿಧಿತ್ವವನ್ನು ಸೂಚಿಸುತ್ತದೆ. ಮೈಸೂರಿನವರ ತ್ಯಾಗ ಮನೋಭಾವನೆಯಿಂದ ಕರ್ನಾಟಕ ಎಂದು ಬದಲಾಯಿತು. ಭೌಗೊಳಿಕವಾಗಿ ಕನ್ನಡಿಗರು ಒಂದಾದರೆ ಸಾಲದು ಭಾವನಾತ್ಮಕವಾಗಿ ಒಂದಾಗಬೇಕು ಎಂದು ಹೇಳಿದರು.

ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಡಾ.ಎಸ್. ಶಿವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಶಾರದಾ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ. ಪ್ರಸಾದಮೂರ್ತಿ, ಶ್ರೀನಟರಾಜ ಮಹಿಳಾ ಪಿಯು ಕಾಲೇಜಿನ ಪ್ರಾಂಶುಪಾಲೆ ವಿ.ಡಿ. ಸುನೀತಾರಾಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net