

ಚಿಕ್ಕಬಳ್ಳಾಪುರ: ನಟ ಕಮಲ್ ಹಾಸನ್ ತಮಿಳಿನಿಂದ ಕನ್ನಡ ಹುಟ್ಟಿದೆ ಎಂಬ ಆಕ್ಷೇಪಾರ್ಹ ಹೇಳಿಕೆಯನ್ನೂ ಖಂಡಿಸುವಲ್ಲೂ ಕನ್ನಡಿಗರಲ್ಲಿ ಅಸಡ್ಡೆ ಧೋರಣೆ ಕಂಡು ಬರುತ್ತಿದೆ. ವಿರೋಧವು ಕೆಲವರಿಗೆ ಮಾತ್ರ ಸೀಮಿತವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಕಿಡಿಕಾರಿದ್ದಾರೆ.
ಈಗಾಗಲೇ ಉತ್ತರದ ಕಡೆಗೆ ಮಹಾರಾಷ್ಟ್ರ, ದಕ್ಷಿಣದಲ್ಲಿ ಕೇರಳ, ಪೂರ್ವದಲ್ಲಿ ಆಂಧ್ರ ಸೇರಿ ನಾಲ್ಕು ದಿಕ್ಕುಗಳಲ್ಲೂ ಕರ್ನಾಟಕದ ಭಾಗವನ್ನು (ಬೆಳಗಾವಿ, ಕಾಸರಗೋಡು, ಬಳ್ಳಾರಿ) ಕಸಿದುಕೊಳ್ಳುವ ಯತ್ನವಾಗಿದೆ. ನಾಡು ನುಡಿಯ ಬಗ್ಗೆ ನಿರಂತರವಾಗಿ ಕಡೆಗಣನೆಯ ಹೇಳಿಕೆಗಳು, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಸಿತ, ಕನ್ನಡಿಗರಿಗೆ ಉದ್ಯೋಗ ಸಿಗದಿರುವುದು ಸೇರಿ ಅಹಿತಕರ ಕೆಲ ಬೆಳವಣಿಗೆಗಳು ವರದಿಯಾಗುತ್ತಿವೆ. ಹಿಂದಿ ಹೇರಿಕೆಯನ್ನು ವಿರೋಧಿಸುವಲ್ಲಿನ ಧೋರಣೆಯು ಆಂಗ್ಲ ಭಾಷೆಯ ವಿಚಾರದಲ್ಲಿ ಕಂಡು ಬರುತ್ತಿಲ್ಲ. ಸರ್ಕಾರಗಳು ಜನಜಾಗೃತಿಯಿಂದ ಎಚ್ಚೆತ್ತುಕೊಳ್ಳುತ್ತವೆ. ದೊಡ್ಡ ಸಮೂಹದ ಒಲವಿಗೆ ಅನುಗುಣವಾಗಿ ನೀತಿಗಳನ್ನು ರೂಪಿಸುತ್ತವೆ. ಹೀಗಿರುವಾಗ ಕನ್ನಡಿಗರ ಅಸಡ್ಡೆಯು ಸರಿಯೇ? ಎಂದು ಪ್ರಶ್ನಿಸಿದ್ದಾರೆ.