

ಮೈಸೂರು: ಕನ್ನಡಿಗರು, ಮಾತೃಭಾಷೆಯ ಜತೆಗೆ ಇತರ ಭಾಷೆ ಮತ್ತು ಸಂಸ್ಕೃತಿಗೂ ಸಮಾನ ಗೌರವ ನೀಡುವ ಹೃದಯ ವೈಶಾಲ್ಯತೆ ಉಳ್ಳವರಾಗಿದ್ದು, ಶಾಂತಿ ಮತ್ತು ಸೌಹಾರ್ದತೆಯ ರಾಯಭಾರಿಗಳು ಎಂದು ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎ.ಕೆ.ಮೂರ್ತಿ ಹೇಳಿದರು.
ನಗರದ ಮೈಸೂರು-ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಬ್ಬ ಕನ್ನಡಿಗರು ನಾಡಿನ ಸಂಸ್ಕೃತಿ, ನೆಲ-ಜಲ ಭಾಷೆಯ ಉಳಿವಿಗಾಗಿ ಸದಾ ಕಟಿಬದ್ಧರಾಗಿರಬೇಕು ಎಂದು ಸಲಹೆ ನೀಡಿದರು.
ಡೀನ್ ಡಾ.ಎಂ.ಎಸ್.ಗೋವಿಂದೇಗೌಡ ಮಾತನಾಡಿ, ಕರ್ನಾಟಕದ ಏಕೀಕರಣಕ್ಕೆ ಶ್ರಮಿಸಿದ ಮಹನೀಯರನ್ನು ಸ್ಮರಿಸಿದರು. ರಾಜ್ಯದಲ್ಲಿ 1950ರ ನಂತರ ಆದ ಬೆಳವಣಿಗೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಸಂಯೋಜಕ ಚಂದ್ರಶೇಖರ್ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಕನ್ನಡ ಸಂಕಲ್ಪವಿಧಿ ಬೋಧಿಸಿದರು. ರಾಮಚಂದ್ರ ರಸಪ್ರಶ್ನೆ ನಡೆಸಿಕೊಟ್ಟರು. ಬಳಿಕ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಐಕ್ಯೂಎಸಿ ನಿರ್ದೇಶಕ ಡಾ.ಎಲ್.ಬಸವರಾಜ್, ಆಡಳಿತಾಧಿಕಾರಿ ಡಾ.ಸಚ್ಚಿದಾನಂದಮೂರ್ತಿ, ಡೀನ್ ಡಾ.ಎಸ್.ಆರ್.ಭಾಗ್ಯಶ್ರೀ, ಸಿ.ಚಂದ್ರಶೇಖರ್, ರುದ್ರೇಶ್, ಕಿರಣ್, ರಾಘವೇಂದ್ರ, ಶ್ರುತಿ ಇತರರಿದ್ದರು.