

ಆನೇಕಲ್: ಕೈಗಾರಿಕೆಗಳಲ್ಲಿ ಹೆಚ್ಚಾಗಿ ಸ್ಥಳೀಯರಿಗೆ ಹಾಗೂ ಕನ್ನಡಿಗರಿಗೆ ಆದ್ಯತೆ ನೀಡುವುದು ಉತ್ತಮ ಬೆಳವಣಿಗೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ. ಚನ್ನಣ್ಣನವರ್ ಹೇಳಿದರು.
ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ಬೊಮ್ಮಸಂದ್ರ ಕೈಗಾರಿಕಾ ಅಸೋಸಿಯೇಷನ್ ಹಾಗೂ ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೊಮ್ಮಸಂದ್ರ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚಾಗಿ ಕನ್ನಡಿಗರಿಗೆ ಆದ್ಯತೆ ನೀಡಿದ ಬಳಿಕ ಯುವಕರು ಉದ್ಯೋಗವನ್ನು ಅರಸಿ ದೂರದ ಊರಿಗೆ ಹೋಗುವುದನ್ನು ತಪ್ಪಿಸಿದಂತಾಗುತ್ತದೆ ಎಂದರು.
ಪೊಲೀಸ್ ಇಲಾಖೆಯಿಂದ ಸ್ಥಳೀಯವಾಗಿ ನಡೆಯುವ ಅಪರಾಧ ಕೃತ್ಯವನ್ನು ತಡೆಯಲು ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇವೆ ಆದರೆ ಎಲ್ಲವನ್ನೂ ಪೊಲೀಸರೇ ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರ ಹಾಗೂ ಕೈಗಾರಿಕೆಗಳ ಮಾಲೀಕರು ಸಹಕಾರ ಅವಶ್ಯಕ ಎಂದರು.
ಅನವಶ್ಯಕವಾಗಿ ರಸ್ತೆಗಳ ಪಕ್ಕದಲ್ಲಿ ನಿಲ್ಲುವುದು, ಸಾರ್ವಜನಿಕರ ಸ್ಥಳಗಳಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಓಬವ್ವ ಪಡೆ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಆನೇಕಲ್ ತಾಲೂಕಿಗೆ ಇಬ್ಬರು ಹೆಚ್ಚುವರಿ ಪಿ.ಎಸ್.ಐ ನಿಯೋಜಿಸಲಾಗಿದೆ ಎಂದರು.
ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಸಾದ್ ಮಾತನಾಡಿ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಿಂದ ಪೊಲೀಸ್ ಇಲಾಖೆಗೆ ಬೇಕಾದ ಸಹಕಾರ ನೀಡಲು ಸಿದ್ಧವಿದ್ದೇವೆ ಎಂದರು.
ಡಿವೈಎಸ್‌ಪಿ ನಂಜುಂಡೇಗೌಡ, ಆನೇಕಲ್ ಪೊಲೀಸ್ ವೃತ್ತ ನಿರೀಕ್ಷಕ ಕೃಷ್ಣ, ಜಿಗಣಿ ಪೊಲೀಸ್ ವೃತ್ತ ನಿರೀಕ್ಷಕ ವಿಶ್ವನಾಥ್,ಹೆಬ್ಬಗೋಡಿ ಪೊಲೀಸ್ ವೃತ್ತ ನಿರೀಕ್ಷಕ ಸತೀಶ್, ಕೈಗಾರಿಕಾ ಉದ್ಯಮಿಗಳಾದ ಸಿಂಗ್ವಿ, ಕಾಂಗ್ರೆಸ್ ಮುಖಂಡರಾದ ಲಿಂಗಣ್ಣ, ಗಟ್ಟಳ್ಳಿ ಸೀನಪ್ಪ ಇದ್ದರು.