ಕನ್ನಡಿಗರ ಸಾಧನೆ ದಾಖಲಾಗಲಿ

12Khanapur1-Web1
Published on

ಖಾನಾಪುರ: ತಾವು ಹುಟ್ಟಿ ಬೆಳೆದ ತಮ್ಮ ತವರು ನೆಲದಲ್ಲಿ ಸಂಘಟಿಸಿರುವ ಕನ್ನಡದ ಹಬ್ಬದಲ್ಲಿ ಅಧ್ಯಕ್ಷೆಯಾಗಿ ಭಾಗವಹಿಸುವ ಅದೃಷ್ಟ ಸಿಕ್ಕಿದ್ದನ್ನು ನಾನು ತವರುಮನೆ ಉಡುಗೊರೆ ಎಂದು ಭಾವಿಸಿದ್ದೇನೆ. ನಿಸರ್ಗದತ್ತವಾದ ಅರಣ್ಯ ಪ್ರದೇಶ ಹೊಂದಿದ ಮತ್ತು ವನದೇವಿಯ ತಾಣವಾದ ಗಡಿಗ್ರಾಮ ಲೋಂಡಾದಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು ಸಂತೋಷದ ಸಂಗತಿ ಎಂದು ಸಮ್ಮೇಳನಾಧ್ಯಕ್ಷೆ ಡಾ.ಹೇಮಾವತಿ ಸೋನೊಳ್ಳಿ ಅಭಿಪ್ರಾಯಪಟ್ಟರು.

ಲೋಂಡಾ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ರಿಟಿಷರ ಕಾಲದಿಂದಲೂ ರೈಲ್ವೆ ಜಂಕ್ಷನ್ ಹೊಂದಿರುವ ಲೋಂಡಾದಲ್ಲಿ ಸದ್ಯ 18 ಭಾಷೆಯನ್ನಾಡುವ ಜನರು ವಾಸವಾಗಿದ್ದಾರೆ. ಗಡಿಭಾಗದಲ್ಲಿ ಅವರೊಂದಿಗೆ ಸಹಬಾಳ್ವೆಯಿಂದ ವಾಸಿಸುತ್ತಿರುವ ನಾವೆಲ್ಲರೂ ಕನ್ನಡವನ್ನು ಕಟ್ಟುವ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು. ಗಡಿನಾಡಿನ ಕನ್ನಡ ಸಾಧಕರ ಸಾಧನೆಯನ್ನು ಸ್ಮರಿಸುವ ಮತ್ತು ದಾಖಲಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಕರೊನಾ ಆತಂಕದ ನಡುವೆಯೂ ಗ್ರಾಮದ ಜನರು ಸಾಹಿತ್ಯ ಸಮ್ಮೇಳನದಲ್ಲಿ ಹುರುಪಿನಿಂದ ಭಾಗವಹಿಸುವ ಮೂಲಕ ಕನ್ನಡಪ್ರೇಮ ಮೆರೆದಿದ್ದಾರೆ. ಇದು ಇತರೆ ಗಡಿಭಾಗದ ವಾಸಿಗಳ ಪಾಲಿಗೆ ಅನುಕರಣೀಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಮಂಜುನಾಥ ಸುಳ್ಳೊಳ್ಳಿ ಮಾತನಾಡಿ, ದಶಕಗಳ ಹಿಂದೆ, ಖಾನಾಪುರ ತಾಲೂಕಿನಲ್ಲಿ ಕನ್ನಡದ ಕಾರ್ಯಕ್ರಮಗಳು ಜರುಗುವ ಪರಿಸ್ಥಿತಿ ಇರಲಿಲ್ಲ. ಈಗ ಆ ಪರಿಸ್ಥಿತಿ ಇಲ್ಲ. ಎಲ್ಲೆಡೆ ಕನ್ನಡದ ಕಂಪು
ಪಸರಿಸುತ್ತಿರುವುದು ಸಂತೋಷದ ಸಂಗತಿ ಎಂದರು.

ಲೋಂಡಾ ಸೇರಿ ಖಾನಾಪುರ ತಾಲೂಕಿನಲ್ಲಿ ಮರಾಠಿ, ಕೊಂಕಣಿ, ಉರ್ದು ಮತ್ತು ಕನ್ನಡ ಭಾಷಿಕರು ಪರಸ್ಪರ ಪ್ರೀತಿ ಮತ್ತು ಅನ್ಯೋನ್ಯತೆಯಿಂದ ಬಾಳುತ್ತಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಅವರಲ್ಲಿ ಯಾವುದೇ ಬೇಧಭಾವವಿಲ್ಲ. ಆದರೆ ಕೆಲ ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳು ಭಾಷಾ ಸಾಮರಸ್ಯ ಹಾಳು ಮಾಡುವ ಕೆಲಸ ಮಾಡುತ್ತಿರುವುದು ಖಂಡನೀಯ. | ಡಾ.ಹೇಮಾವತಿ ಸೊನೊಳ್ಳಿ. ಸಮ್ಮೇಳನದ ಸರ್ವಾಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net