ಕೇದಾರನಾಥದಲ್ಲಿ ಕನ್ನಡಿಗ ಯಾತ್ರಿಗಳು ಸುರಕ್ಷಿತ

yatras
Published on

ಬೆಂಗಳೂರು: ಕೇದಾರನಾಥ ಯಾತ್ರೆಗೆ ತೆರಳಿದ್ದ 40 ಮಂದಿ ಕನ್ನಡಿಗ ಯಾತ್ರಿಕರು ಮಾರ್ಗ ಮಧ್ಯೆಯಲ್ಲಿ ಪ್ರವಾಹ ಪರಿಸ್ಥಿತಿಯಿಂದಾಗಿ ಯಾತ್ರೆ ಮುಂದುವರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದು, ಸದ್ಯ ಅವರೆಲ್ಲರೂ ಸುರಕ್ಷಿತವಾಗಿದ್ದಾರೆ.

ಕಳೆದ ಎರಡು ದಿನಗಳಿಂದ ಅಷ್ಟೂ ಮಂದಿ ತಮ್ಮ ಪ್ರಯಾಣ ಮೊಟಕುಗೊಳಿಸಿ ಕೇದಾರನಾಥ ಸಮೀಪದ ಸೀತಾಪುರ ಎಂಬ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದಾರೆ. ಕನ್ನಡಿಗ ಯಾತ್ರಿಕರ ಜತೆಗೆ ಬೇರೆ ರಾಜ್ಯಗಳ ಯಾತ್ರಿಗಳೂ ಇರುವುದರಿಂದ ಉತ್ತರಾಖಂಡ್ ಸರ್ಕಾರ ಅವರೆಲ್ಲರನ್ನು ಸಂಪರ್ಕಿಸಿ ಸುರಕ್ಷಿತವಾಗಿ ವಾಪಸ್ ತವರಿಗೆ ಕಳುಹಿಸಲು ವ್ಯವಸ್ಥೆ ಮಾಡಲಿದೆ.

ಬುಧವಾರ ಸಂಜೆ ವೇಳೆಗೆ ರಸ್ತೆ ಸಂಪರ್ಕ ಪುನರ್ ಸ್ಥಾಪನೆಯಾಗುವ ನಿರೀಕ್ಷೆ ಇದೆ. ಇದು ಸಾಧ್ಯವಾದಲ್ಲಿ ಟೂರ್ ಟ್ರಾವೆಲ್ಸ್ ಸಿಬ್ಬಂದಿ ಉತ್ತರಾಖಂಡ್ ಅಧಿಕಾರಿಗಳ ನೆರವಿನೊಂದಿಗೆ ಸುರಕ್ಷಿತವಾಗಿ ವಾಪಸ್ ಕರೆತರಲಾಗುತ್ತದೆ. ಪರಿಸ್ಥಿತಿ ಸುಧಾರಿಸದಿದ್ದಲ್ಲಿ ಗುರುವಾರದ ವೇಳೆಗೆ ಕನ್ನಡಿಗರನ್ನು ಕರೆತರಲು ಕರ್ನಾಟಕ ರಾಜ್ಯ ಪ್ರಕೃತಿವಿಕೋಪ ತಡೆ ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಸಿದ್ಧತೆ ನಡೆಸಿದೆ.

ರಾಜ್ಯದಿಂದ ಯಾತ್ರೆಗೆ 40 ಮಂದಿ ತೆರಳಿದ್ದು, ಈ ಪೈಕಿ ಐವರು ಚಿತ್ರದುರ್ಗ, ಮೂವರು ಶಿವಮೊಗ್ಗ ಹಾಗೂ ಉಳಿದವರು ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಕೆಎಸ್‌ಡಿಎಂಎ ಅಧಿಕಾರಿಗಳು ಯಾತ್ರಿಗಳನ್ನು ವಾಪಸ್ ಕರೆತರುವ ನಿಟ್ಟಿನಲ್ಲಿ ಉತ್ತರಾಖಂಡ್ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಿದೆ. ಜತೆಗೆ ಯಾತ್ರಿಗಳಿಗೂ ಧೈರ್ಯ ತುಂಬವಲ್ಲಿ ಯಶಸ್ವಿಯಾಗಿದೆ.

ಈ ಕುರಿತು ‘ವಿಜಯವಾಣಿ’ ಯೊಂದಿಗೆ ಮಾತನಾಡಿದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ರಶ್ಮೀ ಮಹೇಶ್, ಯಾತ್ರೆಗೆ ತೆರಳಿರುವ 40 ಮಂದಿ ಸುರಕ್ಷಿತವಾಗಿದ್ದಾರೆ. ಅವರಿಗೆ ಅಗತ್ಯ ಸೌಲಭ್ಯವನ್ನು ಸ್ಥಳೀಯ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಉತ್ತರಾಖಂಡ್ ಅಧಿಕಾರಿಗಳೊಂದಿಗೆ ಕೆಎಸ್‌ಡಿಎಂಎ ಅಧಿಕಾರಿಗಳು ಸತತ ಸಂಪರ್ಕದಲ್ಲಿದ್ದು, ರಸ್ತೆ ಮಾರ್ಗ ಪುನರ್ ಸ್ಥಾಪನೆಯಾಗುತ್ತಿದ್ದಂತೆ ಯಾತ್ರಿಗಳನ್ನು ವಾಪಸ್ ಕರೆತರಲಾಗುವುದು. ಈ ಕುರಿತು ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net