

ಬಂಗಾರಪೇಟೆ: ಡಾ. ದೇವನಹಳ್ಳಿ ವೆಂಕಟರಾಮಯ್ಯ ಗುಂಡಪ್ಪ (ಡಿವಿಜಿ ) ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು ಹಾಗೂ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದ ಅವರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಖ್ಯಾತಿಗೊಂಡವರು ಎಂದು ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಗೋಪಾಲಗೌಡ ಹೇಳಿದರು.
ತಾಲೂಕು ಕಸಾಪ ಮತ್ತು ಅನಿಕೇತನ ಕನ್ನಡ ಬಳಗದಿಂದ ಸ್ಥಳಿಯ ಅಕ್ಕಚ್ಚಮ್ಮ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಡಿವಿಜಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡದ 21ನೇ ಶತಮಾನದ ಭಗವದ್ಗೀತೆಯು ಡಿವಿಜಿ ಸಂಯೋಜಿಸಿದ "ಮಂಕುತಿಮ್ಮನ ಕಗ್ಗ' 1943ರಲ್ಲಿ ಪ್ರಕಟವಾದ ಅತ್ಯಂತ ಪ್ರಸಿದ್ಧ ಹಾಗೂ ಜನಪ್ರಿಯ ಸಾಹಿತ್ಯ ಕೃತಿಗಳಲ್ಲಿ ಒಂದಾಗಿದ್ದು, ಕನ್ನಡ ಮಾತನಾಡುವ ಜನಸಂಖ್ಯೆಯಲ್ಲಿ ವ್ಯಾಪಕವಾಗಿ ಶ್ರೇಷ್ಠ ಕೃತಿಯಾಗಿದೆ. ಈ ಪದ್ಯಗಳು ನೈತಿಕ ಮೌಲ್ಯಗಳಲ್ಲಿ ಸಮೃದ್ಧವಾಗಿದೆ. ಕೃತಿಯಲ್ಲಿ ಬರುವ ಕಗ್ಗವು ವ್ಯಕ್ತಿಗಳ ಜ್ಞಾನಮಟ್ಟವನ್ನು ಪ್ರತಿಯೊಬ್ಬರಿಗೂ ಚಿಂತನೆಯ ಪ್ರಕ್ರಿಯೆಯನ್ನು ಪ್ರಚೋದಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಆದರ್ಶ ಶಾಲೆ ಕನ್ನಡ ಉಪನ್ಯಾಸಕಿ ಎನ್.ಎಸ್.ಶ್ಯಾಮಲಾ ಮಾತನಾಡಿ, ಡಿವಿಜಿ ಅವರ ಹೆಸರು ಕೇಳಿದಾಗ ನೆನಪಿಗೆ ಬರುವುದೇ ಮಂಕುತಿಮ್ಮನ ಕಗ್ಗ. ಕನ್ನಡ ನಾಡಿನ ಅತ್ಯಮೂಲ್ಯ ಕೃತಿಗಳಲ್ಲಿ ಒಂದು. ಅದರಲ್ಲಿ ಸಾಹಿತ್ಯ, ಸಂಸತಿ, ಸಾಮಾಜಿಕ ಸಮಸ್ಯೆ, ರಾಜಕೀಯ ಸ್ಥಿತಿಗಳು, ಜನಸಾಮಾನ್ಯರ ಬದುಕು ಹೀಗೆ ಪ್ರಸ್ತಾಪವಾಗದ ವಿಚಾರವೇ ಇಲ್ಲ. ಈ ಪದ್ಯಗಳು ಜನಸಾಮಾನ್ಯರ ನಾಲಿಗೆ ಮೇಲೆ ಸದಾಕಾಲ ನಲಿದಾಡಿರುತ್ತದೆ ಎಂದರು.
ಪೋಪ್ ಫ್ರಾನ್ಸಿಸ್ ನಿಧನದ ಹಿನ್ನಲೆ ಕಾರ್ಯಕ್ರಮಕ್ಕೂ ಮುನ್ನ ಮೌನಾಚರಣೆ ಮಾಡಲಾಯಿತು. ಕಾರ್ಯಕ್ರಮ ನಂತರ ವೇದಿಕೆಯಲ್ಲಿ ಮಕ್ಕಳಿಂದ ವಿವಿಧ ಸಾಂಸತಿಕ ಕಾರ್ಯಕ್ರಮಗಳು ನಡೆದವು. ಜೈನ್ ಶಾಲೆಯ ಉಪನ್ಯಾಸಕ ಶ್ರೀನಿವಾಸ್, ವಕೀಲ ಜಯಪ್ರಕಾಶ್, ಅನಿಕೇತನ ಬಳಗದ ಸಂಸ್ಥಾಪಕ ರಾಮ್ ಪ್ರಸಾದ್, ಕಸಾಪ ತಾಲೂಕು ಅಧ್ಯಕ್ಷ ಅಶ್ವತ್ಥ್, ಕನ್ನಡ ಪರ ಹೋರಾಟಗಾರ ಬೇಕರಿ ಶ್ರೀನಿವಾಸ್, ಬಾ.ಹಾ.ಶೇಖರಪ್ಪ ಇದ್ದರು.
ಶೋಕಾಚರಣೆ ಮಧ್ಯೆ ಕಾರ್ಯಕ್ರಮ
ಬುದ್ದಿ ಜೀವಿಗಳ ಕ್ಷೇತ್ರ ಎಂದೇ ಗುರುತಿಸಿಕೊಂಡಿರುವ ಸಾಹಿತ್ಯ ಪರಿಷತ್ ಶೋಕಾಚರಣೆ ದಿನವೇ ಸಾಂಸತಿಕ ಕಾರ್ಯಕ್ರಮಗಳು ನಡೆಸಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಮಾನವತಾವಾದಿ ಪೋಪ್ ಫ್ರಾನ್ಸಿಸ್ ನಿಧನ ಹಿನ್ನೆಲೆಯಲ್ಲಿ ಅಗಲಿದ ಗಣ್ಯರ ಗೌರವಾರ್ಥವಾಗಿ ದೇಶಾದ್ಯಂತ ಏ.24ರವರೆಗೆ ಶೋಕಾಚರಣೆ ಮಾಡಲು ಭಾರತ ಸರ್ಕಾರ ನಿರ್ಧರಿಸಿರುವ ಸಮಯದಲ್ಲಿ ಮನರಂಜನೆ ಕಾರ್ಯಕ್ರಮ ಮಾಡಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡ, ಕಡ್ಡಾಯವಾಗಿ ಕಲಿತರೆ ಮಾತ್ರ ಜೀವನ ನಡೆಸಲು ಅನುಕೂಲವಾಗುತ್ತದೆ. ಇತರೆ ರಾಜ್ಯಗಳಿಂದ ಬರುವವರ ಬಳಿ ನಮ್ಮ ಭಾಷಾ ವ್ಯವಹಾರ ಕನ್ನಡದಲ್ಲೇ ಇರಬೇಕು. ಕನ್ನಡದಲ್ಲೇ ಮಾತನಾಡುವ ಮೂಲಕ ನಮ್ಮ ಭಾಷಾ ಪ್ರೇಮ ಹೊರಗಿನವರಿಗೆ ತೋರಿಸಬೇಕು. ಜೂನ್ನಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು. - ಅಶ್ವತ್ಥ್, ತಾಲೂಕು ಕಸಾಪ ಅಧ್ಯಕ್ಷ, ಬಂಗಾರಪೇಟೆ