ಕನ್ನಡದ ಕಬೀರ ಇಬ್ರಾಹಿಂ ಸುತಾರ ಪುಣ್ಯಸ್ಮರಣೆ ಇಂದು

Kannada's Kabir Ibrahim Sutara commemoration today
ಪದ್ಮಶ್ರೀ ಪುರಸ್ಕೃತ ದಿ.ಇಬ್ರಾಹಿಂ ಸುತಾರ
Published on

ಮಹಾಲಿಂಗಪುರ: ನಾಮ ಹಲವು, ದೇವನೊಬ್ಬನೇ ಎಂದು ಸಾರಿದ ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ದಿ.ಇಬ್ರಾಹಿಂ ಸುತಾರ ಅವರ ತೃತೀಯ ಪುಣ್ಯಸ್ಮರಣೆ ಫೆ.5ರಂದು ಸಂಜೆ 4 ಗಂಟೆಗೆ ಸ್ಥಳೀಯ ಶ್ರೀ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಜರುಗಲಿದೆ.

ಬಡ ಮುಸ್ಲಿಂ ಕುಟುಂಬದಲ್ಲಿ 1940 ರಲ್ಲಿ ಮೇ 10ರಂದು ಜನಿಸಿದ ದಿ.ಇಬ್ರಾಹಿಂ ಸುತಾರ ಸದೃಢ ನೀಳಕಾಯ ದೇಹ, ಅದಕ್ಕೊಪ್ಪುವ ಬಿಳಿ ಪಾಯಜಾಮ್, ನೆಹರು ಶರಟು, ಹೆಗಲ ಮೇಲೊಂದು ಶಾಲು, ತಲೆ ಮೇಲೊಂದು ಗಾಂಧಿ ಟೊಪ್ಪಿಗೆ, ಮುಖವನ್ನು ಭೂಷಣಗೊಳಿಸಿದ ಬಿಳಿ ದಾಡಿ, ತೆಳು ಮೀಸೆ, ಪ್ರಸನ್ನವದನ, ಆಕರ್ಷಕ ಕಣ್ಣುಗಳು, ಮುಖದಲ್ಲಿ ಯಾವತ್ತೂ ಮಾಸದ ಮಂದಹಾಸ ಅವರ ಅಧ್ಯಾತ್ಮದ ವ್ಯಕ್ತಿತ್ವಕ್ಕೆ ಮೆರುಗು ನೀಡಿದ್ದವು.

ಅವರ ಅನುಭಾವ ಸಾಹಿತ್ಯ ಕೃತಿಗಳಾದ ‘ಪರಮಾರ್ಥಲಹರಿ’ (ತತ್ವಪದಗಳು), ‘ತತ್ವಜ್ಞಾನಕ್ಕೆ ಭಾರತೀಯರು’ (ಕನ್ನಡ ಮತ್ತು ಹಿಂದಿ ಪದ್ಯಗಳು) ಪ್ರೇರಕ ಕೃತಿಗಳಾಗಿವೆ. 25ಕ್ಕಿಂತ ಹೆಚ್ಚು ಅವರ ಧ್ವನಿಸುರುಳಿಗಳು ನಾಡಿನಾದ್ಯಂತ ಮೊಳಗುತ್ತಿವೆ. ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ! ನಾವೆಲ್ಲ ಮನುಜರೆಂಬ ಭಾವ ಮೂಡಲಿ! ನಮ್ಮಲ್ಲಿ ಭೇದಭಾವ ಪ್ರಭು ದೂರವಾಗಲಿ! ಎಂಬ ಅವರ ಭಾವ್ಯೆಕ್ಯದ ಹಾಡು ಜನಮನದಲ್ಲಿದೆ.

ಮೈಸೂರು ದಸರಾ, ಹಂಪಿ, ಚಾಲುಕ್ಯ, ನವರಸಪುರ, ಕಿತ್ತೂರು, ಕರಾವಳಿ, ಗಡಿನಾಡು ಉತ್ಸವ, ಬೆಳಗಾವಿ ವಿಶ್ವಕನ್ನಡ ಸಮ್ಮೇಳನ, ಆಳ್ವಾಸ್ ನುಡಿಸಿರಿ, ಶರಣ ಸಂಸ್ಕೃತಿ ಮಹೋತ್ಸವ, ತರಳ ಬಾಳು ಹುಣ್ಣಿಮೆ ಮುಂತಾದ ಉತ್ಸವಗಳಲ್ಲಿ ತಮ್ಮ ‘ಪ್ರವಚನ ಮತ್ತು ಗೀತ ಸಂವಾದ ತರಂಗಿಣಿ’ ಮುಖಾಂತರ ಭಾವೈಕ್ಯದ ಸಂದೇಶವನ್ನು ರಾಜ್ಯದ ಮೂಲೆ ಮೂಲೆಗಳಿಗೆ ತಲುಪಿಸಿದ್ದಾರೆ.

ವಿನೂತನ ಕಲಾಪ್ರಕಾರ

ಪಟ್ಟಣದ ದಿ.ಮಲ್ಲಪ್ಪಣ್ಣ ಶಿರೋಳ ಅವರ ಸಲಹೆಯಂತೆ ಪ್ರಶ್ನೋತ್ತರಗಳ ಜತೆಗೆ ತತ್ವ ಪದಗಳನ್ನು ಹಾಡುವಂಥ ತಮ್ಮ 6 ಜನ ಸಹ ಕಲಾವಿದರೊಂದಿಗೆ ‘ಭಾವೈಕ್ಯ ಭಕ್ತಿ ರಸಮಂಜರಿ’, ‘ಅಧ್ಯಾತ್ಮ ಸಂವಾದ ತರಂಗಿಣ’ ಮತ್ತು ‘ಗೀತ ಸಂವಾದ ತರಂಗಿಣಿ’ ಎಂಬ ಹೆಸರಿನ ವಿನೂತನ ಕಲಾ ಪ್ರಕಾರ ಹುಟ್ಟು ಹಾಕಿದರು. ಮಹಾರಾಷ್ಟ್ರ, ಆಂಧ್ರಪ್ರದೇಶ, ದೆಹಲಿ, ಒಡಿಶಾ, ರಾಜಸ್ಥಾನ, ಗೋವಾ ಮುಂತಾದ ರಾಜ್ಯಗಳಲ್ಲಿ, ದೂರದರ್ಶನ ಕೇಂದ್ರಗಳಲ್ಲಿ ಹಾಗೂ ಖಾಸಗಿ ಸುದ್ದಿವಾಹಿನಿಗಳಲ್ಲಿ ಭಾವೈಕ್ಯ ಭಕ್ತಿ ರಸಮಂಜರಿ ಕಾರ್ಯಕ್ರಮಗಳ ಮೂಲಕ ಸಾಮರಸ್ಯದ ಸಂದೇಶವನ್ನು ನೀಡಿ ಮಹಾಲಿಂಗಪುರದ ಕೀರ್ತಿ ಹೆಚ್ಚಿಸಿದ್ದಾರೆ.

ಪ್ರವಚನ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಯನ್ನು ಪರಿಗಣಿಸಿ 1995ರಲ್ಲಿ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’, ಕಥಾಕೀರ್ತನ ಕ್ಷೇತ್ರದಲ್ಲಿ ಸಲ್ಲಿಸಿರುವ ಅಮೂಲ್ಯ ಸೇವೆಗಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ 2009-10 ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಗೌರವ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿದೆ. 2018ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅಲ್ಲದೆ, ನಾಡಿನ ಭಾವೈಕ್ಯ ರಂಗದಲ್ಲಿ ಸಲ್ಲಿಸಿದ ಅನನ್ಯ ಸೇವೆಗಾಗಿ 2006ನೇ ಸಾಲಿನ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಸೇರಿ ಅನೇಕ ಸಂಘ-ಸಂಸ್ಥೆಗಳು, ಕನ್ನಡದ ಕಬೀರ, ಸೂಫಿಸಂತ ಹೀಗೆ ನೂರಾರು ಪ್ರಶಸ್ತಿಗಳು ಅವರ ಮುಡಿಗೇರಿವೆ. 2016ರಲ್ಲಿ ಇವರ ಅಭಿಮಾನಿ ಬಳಗ 75ನೇ ವರ್ಷದ ಹುಟ್ಟುಹಬ್ಬದ ಸವಿ ನೆನಪಿಗಾಗಿ ಮಹಾಲಿಂಗಪುರದಲ್ಲಿ ‘ಭಾವೈಕ್ಯ ಶಾಂತಿ ಸಮ್ಮೇಳನ’ ಆಯೋಜಿಸಿ ’ಭಾವೈಕ್ಯ ದರ್ಶನ’ ಎಂಬ ಅಭಿನಂದನಾ ಗ್ರಂಥವನ್ನು ಸರ್ಮಪಿಸಿ ಗೌರವಿಸಿದರು. ಪೂಜೆಗಿಂತ ಕಾಯಕ ಶ್ರೇಷ್ಠ ಎಂದು ಹೇಳುತ್ತಿದ್ದ ಸುತಾರ ಅವರು ಅವರು ನಮ್ಮ ಕಣ್ಣುಮುಂದೆ ಇಲ್ಲದಿದ್ದರೂ ಎಲ್ಲರ ಮನಸ್ಸಿನಲ್ಲಿ ಹೃದಯದಲ್ಲಿ ನೆಲೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net