ಮಂಗಳೂರು: ಸಾಹಿತಿ ಪಿ.ವಿ. ಪ್ರದೀಪ್ ಕುಮಾರ್ ಅವರು ನಿರ್ಮಾಣ ಮಾಡಿರುವ ಕನ್ನಡದ ಮೊದಲ ‘ಅದಿತಿ’ ಎಐ ಟೆಲಿ ಫಿಲ್ಮ್ ಬುಧವಾರ ಪತ್ರಿಕಾ ಭವನದಲ್ಲಿ ಬಿಡುಗಡೆಗೊಂಡಿತು.
ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಚಿತ್ರ ಬಿಡುಗಡೆ ಮಾಡಿ ಮಾತನಾಡಿ, ಸಾಹಿತಿಯಾಗಿ 50ಕ್ಕೂ ಅಧಿಕ ಕಾದಂಬರಿಗಳನ್ನು ಬರೆದಿರುವ ಪಿ.ವಿ. ಪ್ರದೀಪ್ ಕುಮಾರ್ ಅವರು ಟೆಲಿ ಫಿಲ್ಮ್ ಮೂಲಕ ಸಾಹಿತ್ಯವನ್ನು ಜನರಿಗೆ ತಲುಪಿಸಲು ಹೊಸ ಪ್ರಯತ್ನ ಮಾಡಿದ್ದಾರೆ. ತಂತ್ರಜ್ಞಾನಗಳು ಆವಿಷ್ಕಾರಗೊಳ್ಳುತ್ತಿದ್ದಂತೆ ಅದಕ್ಕೆ ಒಗ್ಗಿಕೊಂಡು ಅದರ ಬಳಕೆ ಮಾಡುವುದು ಕಾಲದ ಅನಿವಾರ್ಯತೆ ಎಂದರು.
ನಿರ್ಮಾಪಕ ಪಿ.ವಿ. ಪ್ರದೀಪ್ ಕುಮಾರ್ ಮಾತನಾಡಿ, ಈ ಸಿನಿಮಾ ಕಾದಂಬರಿ ಆಧರಿತವಾಗಿದ್ದು, ಈ ಸಿನಿಮಾಕ್ಕೆ ಕಥೆ, ಚಿತ್ರ ಕಥೆ, ಡಬ್ಬಿಂಗ್, ಸಂಭಾಷಣೆ, ಎಡಿಟಿಂಗ್, ಸಂಗೀತ ಎಲ್ಲಾ ನನ್ನದೇ ಆಗಿದೆ. ನಾನು 2 ಗಂಟೆಯ ಸಿನಿಮಾ ಮಾಡಲು ಮುಂದಾಗಿದ್ದು, ಹಣಕಾಸಿನ ಕೊರತೆಯಿಂದ 45 ನಿಮಿಷಕ್ಕೆ ಮುಗಿಸಿದೆ ಎಂದು ಹೇಳಿದರು.
‘ಅದಿತಿ’ ಚಿತ್ರವು ವಿಭಿನ್ನ ಶೈಲಿಯ ಸಸ್ಪೆನ್ಸ್, ಆ್ಯಕ್ಷನ್ ಹಾಗೂ ಎಮೋಷನಲ್ ಲವ್ ಸ್ಟೋರಿಯನ್ನು ಒಳಗೊಂಡಿದೆ. ಚಿತ್ರದಲ್ಲಿ ಕಥೆಗೆ ಪೂರಕವಾದ ಸಸ್ಪೆನ್ಸ್ ಮತ್ತು ರಹಸ್ಯಗಳ ಜೊತೆಗೆ ಅತ್ಯಂತ ಆಪ್ತವಾಗಿ ಕಾಡುವ ಪ್ರೇಮ ಕಥೆಯೂ ಇದೆ. ಸಾಹಿತ್ಯಿಕ ಆಳ ಮತ್ತು ಸಿನಿಮ್ಯಾಟಿಕ್ ದೃಶ್ಯ ವೈಭವ ಸಮ್ಮಿಲನವಾಗಿರು ಅದಿತಿ ಚಿತ್ರದಲ್ಲಿ ಎಐ ಸಹಾಯದೊಂದಿಗೆ ದೃಶ್ಯಗಳನ್ನು ಕಲ್ಪಿಸಿಕೊಳ್ಳಲಾಗಿದೆ.
ಹಿರಿಯ ಪತ್ರಕರ್ತ ರೇಮಂಡ್ ಡಿಕುನ್ನ ತಾಕೋಡೆ, ನಿರ್ಮಾಪಕಿ ಸುನಿತಾ ಪ್ರದೀಪ್ ಕುಮಾರ್, ಪತ್ರಕರ್ತ ರಾಜೇಶ್ ಪೂಜಾರಿ ಇದ್ದರು.