ವಿದ್ಯಾರ್ಥಿಗಳ ಕಂಠಸಿರಿಯಲ್ಲಿ ನಲಿದಾಡಿದ ಕನ್ನಡಾಂಬೆ

29 HANUR 1 C
ಹನೂರಿನ ಜಿ.ವಿ ಗೌಡ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿಜಯವಾಣಿ ಪತ್ರಿಕೆ ಸಹಯೋಗದಲ್ಲಿ ಆಯೋಜಿಸಿದ್ದ ನಾಡು-ನುಡಿ ಗಾಯನ ಸ್ಪರ್ಧಾ ಕಾರ್ಯಕ್ರಮವನ್ನು ಬಿಇಒ ಗುರುಲಿಂಗಯ್ಯ ಉದ್ಘಾಟಿಸಿದರು. ಶಿವಣ್ಣ ಇಂದ್ವಾಡಿ, ಮಲ್ಲೇಶ್ ಮಾಲಿಂಕಟ್ಟೆ, ಶ್ರೀನಿವಾಸನಾಯ್ಡು, ಮಲ್ಲಣ್ಣ, ಮಹಾದೇವ್ ಇತರರು ಇದ್ದರು.
Published on

ಹನೂರು: ವಿದ್ಯಾರ್ಥಿಗಳು ಕನ್ನಡ ನಾಡು ನುಡಿಯ ಹಿರಿಮೆಯನ್ನು ಸಾರುವ ಗೀತೆಗಳನ್ನು ತಮ್ಮದೇ ಅದ ಕಂಠಸಿರಿಯಲ್ಲಿ ಹಾಡಿದರು. ಉತ್ಸಾಹ ಹಾಗೂ ಲವಲವಿಕೆಯಿಂದ ಭಾಗವಹಿಸಿದ್ದರು. ಏಕಾಗ್ರತೆಯಿಂದ ಆಲಿಸಿದರು. ಗಣ್ಯರ ಸಾಹಿತ್ಯದ ಉಪನ್ಯಾಸದ ರಸದೌತಣವನ್ನು ಸವಿಯುವುದರ ಮೂಲಕ ಎಲ್ಲರ ಮನದಲ್ಲಿ ಕನ್ನಡಾಭಿಮಾನ ಮನೆ ಮಾಡಿತ್ತು.

ಇದು ಪಟ್ಟಣದ ಜಿ.ವಿ ಗೌಡ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಹಾಗೂ ಗೀತ ಗಾಯನ ಸ್ಪರ್ಧೆಯಲ್ಲಿ ಹನೂರು ಶೈಕ್ಷಣಿಕ ವಲಯದಿಂದ ಆಗಮಿಸಿದ್ದ ವಿದ್ಯಾರ್ಥಿಗಳಲ್ಲಿ ಕಂಡುಬಂದ ಚಿತ್ರಣ.

ಶೈಕ್ಷಣಿಕ ವಲಯದ ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಗೀತ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತೀರ್ಪುಗಾರರಾಗಿ ಕಸಾಪ ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ್‌ನಾಯ್ಡು ಹಾಗೂ ಮಹಿಳಾ ಘಟಕದ ನಿರ್ದೇಶಕಿ ವಿಜಯಾ ಕಾರ್ಯ ನಿರ್ವಹಿಸಿದರು. ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರದಮಲ್ಲಿ ಕನ್ನಡಾಂಬೆಗೆ ಪುಷ್ಪನಮನ ಸಲ್ಲಿಸಲಾಯಿತು.

ನಾಡಿನ ಜನರು ಸಹೃದಯಿಗಳು: ಕಾರ್ಯಕ್ರಮದಲ್ಲಿ ಸಾಹಿತಿ ಶಿವಣ್ಣ ಇಂದ್ವಾಡಿ ಅವರು ಮಾತನಾಡಿ, ಕನ್ನಡದ ಹಲ್ಮಿಡಿ ಶಾಸನ, ಕಪ್ಪೆ ಆರ್ಯಭಟನ ಬದಾಮಿ ಶಾಸನ ಹಾಗೂ ಇನ್ನಿತರ ಶಾಸನಗಳು ಕನ್ನಡದ ಪ್ರಾಚೀನತೆಯನ್ನು ಸಾರುವ ಆಧಾರಗಳಾಗಿವೆ. ಆದರೆ ಕಾವ್ಯದಲ್ಲಿ ಯಾವುದೇ ಆಧಾರವಿಲ್ಲ. ಆದರೆ ಶ್ರೀ ವಿಜಯನ ಕವಿರಾಜ ಮಾರ್ಗದಲ್ಲಿ ಕಾವ್ಯದ ಲಕ್ಷಣವನ್ನು ತಿಳಿಸುತ್ತದೆ. ಕನ್ನಡ ನಾಡಿನ ಬಗ್ಗೆ ಹಲವು ಶಾಸನಗಳಿಂದ ಇತಿಹಾಸ ತಿಳಿಯುತ್ತದೆ. ಈ ಹಿಂದೆ ರಾಷ್ಟ್ರಕೂಟರ ಕಾಲದಲ್ಲಿ ಕನ್ನಡ ನಾಡು ಕಾವೇರಿಯಿಂದ ಗೋದಾವರಿವರೆಗೆ, ಇಮ್ಮಡಿ ಪುಲಕೇಶಿ ಕಾಲದಲ್ಲಿ ಅಜಂತ-ಎಲ್ಲೋರಾ ಹಾಗೂ ಇದೀಗ ಕರುನಾಡು ಚಾ.ನಗರದಿಂದ ಬೀದರ್‌ವರೆಗೆ ಎಲ್ಲೆಯನ್ನು ಹೊಂದಿದೆ. ನಾಡಿನ ಜನರು ನೀರು ಕೇಳಿದವರಿಗೆ ಪಾನಕ, ಹಸಿದವರಿಗೆ ಊಟ ನೀಡುವ ವಿಶಾಲ ಹೃದಯವುಳ್ಳ ಕರುಣಾಮಯಿಗಳು. ನಾಡಿಗೆ ಉದ್ಯೋಗವನ್ನು ಹರಸಿ ಆಗಮಿಸಿರುವ ಇತರ ರಾಜ್ಯದ ಜನರು ಹೆಚ್ಚಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇಲ್ಲಿನ ಜನರು ಅವರದ್ದೇ ಭಾಷೆಯಲ್ಲಿ ಮಾತನಾಡುತ್ತಾರೆ. ಆದರೆ ರಾಜ್ಯದ ಜನರು ಇತರ ರಾಜ್ಯಗಳಿಗೆ ತೆರಳಿದಾಗ ಅಲ್ಲಿನ ಜನರು ನಮ್ಮ ಭಾಷೆಗೆ ಸ್ಪಂದನೆ ಸಿಗುವುದಿಲ್ಲ. ಹಾಗಾಗಿ ನಮ್ಮ ನಾಡಿನ ಜನರು ಸಹೃದಯಿಗಳು ಎಂದು ತಿಳಿಸಿದರು.

ಮಲೆಮಹದೇಶ್ವರ ಕಾವ್ಯ ವಿಶ್ವದ ಮೌಖಿಕ ಕಾವ್ಯ: ಹಿಂದಿನ ಕಾಲಘಟ್ಟದಲ್ಲಿ ಕೃಷಿಯ ಜತೆಗೆ ಜನರ ಜೀವನ ಶೈಲಿ ಉತ್ತಮವಾಗಿತ್ತು. ಜನಪದರು ಹಾಡಿನ ಮೂಲಕ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದರು. ಆದರೆ ಇತ್ತೀಚಿನ ಯುಗದಲ್ಲಿ ಎಲ್ಲವೂ ಮೊಬೈಲ್ ಯುಗವಾಗಿದ್ದು, ಪರಸ್ಪರ ಬಾಂಧವ್ಯ ಹದಗೆಡುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಜನಪದರು ಕಟ್ಟಿಕೊಂಡ ಬದುಕನ್ನು ಅರ್ಥ ಮಾಡಿಕೊಳ್ಳಬೇಕು. ಇದರಿಂದ ಉತ್ತಮ ಜೀವನವನ್ನು ರೂಪಿಸಿಕೊಳ್ಳಬಹುದು. ಇನ್ನು ವಿಶ್ವ ಸಾಹಿತ್ಯದಲ್ಲೇ ಕನ್ನಡದ ವಚನ ಸಾಹಿತ್ಯವಿದೆ. ಈ ಪ್ರಕಾರದ ಸಾಹಿತ್ಯ ಎಲ್ಲಿಯೂ ಇಲ್ಲ. ಇದನ್ನು ಕವಿಗಳು ಅರ್ಥಮಾಡಿಕೊಳ್ಳಲು ಈವರೆಗೂ ಸಾಧ್ಯವಾಗಿಲ್ಲ. ಇಡೀ ವಿಶ್ವದಲ್ಲಿ ಯೂರೋಪ್‌ನ ಪಿನ್‌ಲ್ಯಾಂಡ್ ಕಲೆವಾಲ ಮೌಖಿಕ ಕಾವ್ಯವಾಗಿದೆ. ಆದರೆ ಗ್ರಾಂಥಿಕ ರೂಪವಿಲ್ಲ. ಆದರೆ ಶ್ರೀ ಮಲೆಮಹದೇಶ್ವರರ ಮಹಾಕಾವ್ಯ ಮೌಖಿಕ ಕಾವ್ಯವಾಗಿದ್ದು, ಇದನ್ನು ಜನಪದರು ಕಟ್ಟಿ ಬೆಳೆಸಿದ್ದಾರೆ ಎಂದು ತಿಳಿಸಿದರು.

ಕನ್ನಡ ಉದ್ಯೋಗವನ್ನು ದೊರಕಿಸಿ ಕೊಟ್ಟಿದೆ: ಕಾರ್ಯಕ್ರಮ ಉದ್ಘಾಟಿಸಿದ ಬಿಇಒ ಗುರುಲಿಂಗಯ್ಯ ಮಾತನಾಡಿ, ಕನ್ನಡ ಸಾಹಿತ್ಯವು ಓಲೆಗರಿ ಹಾಗೂ ಶಿಲ್ಪಕಲೆಯಿಂದ ಬೆಳಕಿಗೆ ಬಂದಿದೆ. ಆದ್ದರಿಂದ ಶಾಸನಗಳು ಕನ್ನಡ ಸಾಹಿತ್ಯದ ಹುಟ್ಟು ಬೆಳವಣಿಗೆಯನ್ನು ತಿಳಿಸುತ್ತದೆ. ಆದ್ದರಿಂದ ಕನ್ನಡದ ಸಾಹಿತ್ಯವನ್ನು ತಿಳಿಯಬೇಕು. ಆದ್ದರಿಂದ ಪ್ರತಿಯೊಬ್ಬರೂ ಕನ್ನಡದ ಬಗ್ಗೆ ಒಲವನ್ನು ಬೆಳೆಸಿಕೊಳ್ಳಬೇಕು ಎಂದರು.

ಬಹುಮಾನ ವಿತರಣೆ: ಗೀತ ಗಾಯನ ಸ್ಪರ್ಧೆಯಲ್ಲಿ ವೈಯಕ್ತಿಯ ಸ್ಪರ್ಧೆಯಲ್ಲಿ ಕುರಟ್ಟಿ ಹೊಸೂರು ಪ್ರೌಢಶಾಲೆಯ ಕಾವ್ಯ ಪ್ರಥಮ , ಇದೇ ಶಾಲೆಯ ತನು ದ್ವಿತೀಯ ಹಾಗೂ ಲೊಕ್ಕನಹಳ್ಳಿ ಕೆಪಿಎಸ್ ಶಾಲೆಯ ಲಕ್ಷ್ಮೀ ತೃತೀಯ ಸ್ಥಾನ ಪಡೆದರೆ, ಸಾಮೂಹಿಕ ಸ್ಪರ್ಧೆಯಲ್ಲಿ ಬಿಎಂಜಿ ಶಾಲೆಯ ಬೇಬಿ ತಂಡ ಪ್ರಥಮ, ಕುರಟ್ಟಿ ಹೊಸೂರು ಶಾಲೆಯ ಪುಟ್ಟಲಕ್ಷ್ಮೀ ತಂಡ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಜಿ.ವಿ.ಗೌಡ ಶಾಲೆಯ ಕುಸುಮ ತಂಡಕ್ಕೆ ಬಹುಮಾನ ವಿತರಿಸಲಾಯಿತು.

ಕಸಾಪ ತಾಲೂಕು ಅಧ್ಯಕ್ಷ ಮಲ್ಲೇಶ್ ಮಾಲಿಂಕಟ್ಟೆ, ಮೈಸೂರು ವಿಭಾಗೀಯ ಸಂಸ್ಕೃತ ವಿಷಯ ಪರಿವೀಕ್ಷಕ ಮಲ್ಲಣ್ಣ, ಮುಖ್ಯಶಿಕ್ಷಕ ಮಹಾದೇವ್, ಶಿಕ್ಷಕರಾದ ಜಿ.ಲೋಕೇಶ್, ಪ್ರದೀಪ್‌ಕುಮಾರ್, ಶಾಂತರಾಜು, ರವಿ, ಶ್ರೀ ವಿವೇಕಾನಂದ ಶಾಲೆಯ ಮುಖ್ಯಶಿಕ್ಷಕ ಮಧುಸೂದನ್, ಕನ್ನಡಪರ ಸಂಘಟನೆಯ ವಿನೋದ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net