ಮೈಸೂರಿನಲ್ಲಿ ಕನ್ನಡಾಂಭೆ ರಕ್ಷಣಾ ವೇದಿಕೆ ಪ್ರತಿಭಟನೆ

protest
Published on

ಮೈಸೂರು: ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು, ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ.60ರಷ್ಟು ಕನ್ನಡ ಬಳಕೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಕನ್ನಡಾಂಭೆ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.

ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಗೆ ಹಿರಿಯ ಸಾಹಿತಿ ಬನ್ನೂರು ಕೆ.ರಾಜು ಚಾಲನೆ ನೀಡಿ ಮಾತನಾಡಿ, ಕನ್ನಡಿಗರ ಅತಿಯಾದ ಔದಾರ್ಯದಿಂದ ಕನ್ನಡ ಇಂದು ಅನಾಥ ಸ್ಥಿತಿಗೆ ತಲುಪಿದೆ. ನಮ್ಮನ್ನು ಆಳು ರಾಜಕಾರಣಿಗಳು ಪಕ್ಷಾತೀತವಾಗಿ ಕನ್ನಡಕ್ಕೆ ದ್ರೋಹ ಬಗೆದಿದ್ದು, ತಮ್ಮ ಸ್ವಾರ್ಥಕ್ಕೆ ಕನ್ನಡ ಭಾಷೆ ಮತ್ತು ಕನ್ನಡಿಗರನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ವಿಧಾನಸೌಧದಲ್ಲಿ ಕನ್ನಡದ ಪರ ದನಿ ಎತ್ತಲು ಒಬ್ಬರು ಸಹ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಾಮಾಣಿಕವಾಗಿ ಹೋರಾಟ ಮಾಡುವವರು ಇಂದು ಬೀದಿಯಲ್ಲಿ ನಿಂತಿದ್ದಾರೆ. ದೂರದ ಜೆಎನ್‌ಯುನಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಿದ್ದ ಪುರುಷೋತ್ತಮ್ ಬಿಳಿಮಲೆ ಎಂಬುವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಆದರೆ, ಅವರು ಕನ್ನಡ ಭಾಷೆ ಉಳಿವಿಗಾಗಿ ಯಾವ ಹೋರಾಟ ಮಾಡಿದ್ದಾರೆ ಅಥವಾ ಅವರಿಗೆ ಕನ್ನಡದ ಬಗ್ಗೆ ಕಾಳಜಿ ಎಷ್ಟಿದೆ ಎಂಬುದೇ ಗೊತ್ತಿಲ್ಲ ಅಂತಹವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಆದರೆ ಪುರುಷೋತ್ತಮ್ ಬಿಳಿಮಲೆ ತಮ್ಮನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದವರ ಅಭಿವೃದ್ಧಿ ಮಾಡಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

ಕನ್ನಡಾಂಭೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ರಾಜಶೇಖರ್ ಮಾತನಾಡಿ, ಇತ್ತೀಚೆಗೆ ಮೈಸೂರು ಸೇರಿದಂತೆ ರಾಜ್ಯದಲ್ಲಿ ಅನ್ಯಭಾಷಿಗ ಉದ್ಯಮಿ, ವ್ಯಾಪಾರಿಗಳು ಕನ್ನಡವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡಕ್ಕೆ ಸಾರ್ವಭೌಮ ಸ್ಥಾನ ನೀಡಬೇಕಾಗಿದ್ದರೂ, ಕನ್ನಡ ಭಾಷೆಯನ್ನು ತಾತ್ಸಾರ ಮನೋಭಾವದಿಂದ ನೋಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡವನ್ನು ನಿರ್ಲಕ್ಷಿಸುವವರಿಗೆ ಎಚ್ಚರಿಕೆ ಸಂದೇಶ ನೀಡಲು ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.

ಖಾಸಗಿ ಕಾರ್ಖಾನೆ, ಕಂಪನಿಗಳಲ್ಲಿ ಕನ್ನಡಿಗೆ ಉದ್ಯೋಗ ನೀಡಬೇಕು. ಜಾಹಿರಾತು ಹಾಗೂ ನಾಮಫಲಕಗಳಲ್ಲಿ ಕನ್ನಡ ಬಳಸಬೇಕು. ಹೋರ್ಡಿಂಗ್ಸ್‌ಗಳಲ್ಲಿ ಕನ್ನಡ ನಿರ್ಲಕ್ಷಿಸಬಾರದು. ಸರ್ಕಾರಿ ಕಚೇರಿ ಹಾಗೂ ಕಾರ್ಖಾನೆಗಳಲ್ಲಿಯೂ ಕನ್ನಡ ಬಳಕೆ ಮಾಡಬೇಕು ಎಂದು ಆಗ್ರಹಿಸಿದರು.

ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಆರಂಭವಾದ ಮೆರವಣಿಗೆ ದೊಡ್ಡ ಗಡಿಯಾರ, ಇರ್ವಿನ್ ರಸ್ತೆ, ನೆಹರು ವೃತ್ತ, ತಾಲೂಕು ಕಚೇರಿ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕನ್ನಡಪರ ಹೋರಾಟಗಾರರಾದ ಡಿ.ಪಿ.ಕೆ. ಪರಮೇಶ್, ನಂಜುಂಡ, ಮಹದೇವಸ್ವಾಮಿ, ಕಿರಣ್, ಸಂತೋಷ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net