ಸಮ್ಮೇಳನಾಧ್ಯಕ್ಷರ ಕನ್ನಡಾಂಬೆ, ಭವ್ಯ ಮೆರವಣಿಗೆ

jkd 13 sammelana
ಜಮಖಂಡಿ ನಗರ ಪ್ರಮುಖ ರಸ್ತೆಗಳಲ್ಲಿ ಜಮಖಂಡಿ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಭವ್ಯ ಮೆರವಣಿಗೆ ಮೆರವಣಿಗೆಗೆ ಶಾಸಕ ನಾಡೋಜ ಜಗದೀಶ ಗುಡಗುಂಟಿ ಚಾಲನೆ ನೀಡಿದರು. ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ಜಿ.ಎಸ್. ನ್ಯಾಮಗೌಡ, ಹಿರಿಯ ನ್ಯಾಯವಾದಿ ಎನ್.ಎಸ್. ದೇವರವರ, ಶ್ರೀಶೈಲ ದಳವಾಯಿ ಇತರರಿದ್ದರು.
Published on

ಜಮಖಂಡಿ: ನಗರದಲ್ಲಿ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಭಾನುವಾರ ಅದ್ದೂರಿ ಕನ್ನಡಾಂಬೆ, ಸಮ್ಮೇಳಾನಾಧ್ಯಕ್ಷರ ಭವ್ಯ ಮೆರವಣಿಗೆ ನಡೆಯಿತು.

ನಗರದಲ್ಲಿ ಅಕ್ಷರ ಜಾತ್ರೆ ಕನ್ನಡ ಸಂಭ್ರಮದ ಹಬ್ಬದ ವಾತಾವರಣ ಮೂಡಿಸಿತಲ್ಲದೆ, ಪ್ರಮುಖ ರಸ್ತೆಯ ಇಕ್ಕೆಲುಗಳ, ಅಂಗಡಿ ಮುಂಗ್ಗಟುಗಳು, ಪ್ರಮುಖ ವೃತ್ತಗಳು, ಕೆಂಪು ಹಳದಿ ವರ್ಣದ ಕನ್ನಡ ಧ್ವಜ ಕಟ್ಟಿ ಮಧುವನಗಿತ್ತಿಯಂತೆ ಅಲಂಕರಿಸಲಾಗಿತ್ತು.

ದೇಸಾಯಿ ವೃತ್ತ, ಪಿ.ಬಿ. ಹೈಸ್ಕೂಲ್ ಹತ್ತಿರ ಸ್ವಾಗತ ಕಮಾನುಗಳು, ರಸ್ತೆಗಳ ಮೇಲೆ ಹಾಕಿರುವ ಕನ್ನಡ ತೋರಣಗಳು ಕನ್ನಡ ಕಳೆ ಹೆಚ್ಚಿಸಿದವು.

ಕನ್ನಡಾಭಿಮಾನಿಗಳು, ಸಾಹಿತಿಗಳು, ಸಾಹಿತ್ಯಾಸಕ್ತರು, ಶಿಕ್ಷಕರು ಮೆರವಣಿಗೆದುದ್ದಕ್ಕೂ ಕನ್ನಡಪರ ಘೋಷಣೆಗಳನ್ನು ಮೊಳಗಿಸಿ ಕನ್ನಡ ಭಾಷಾ ಪ್ರೇಮ ಮೆರೆದರು.

ಕನ್ನಡ ಸಂಭ್ರಮ: ತೆರೆದ ವಾಹನದಲ್ಲಿ ತಾಯಿಭುವನೇಶ್ವರಿ ಭಾವಚಿತ್ರ, ಚಿನ್ನ ವರ್ಣದ ರಥದ ವಾಹನದಲ್ಲಿ ಸಮ್ಮೇಳನಾಧ್ಯಕ್ಷ ವೇದಾಂತ ಆಚಾರ್ಯ ಸಹಜಾನಂದ ಅವಧೂತರು ಹಾಗೂ ಜಿಲ್ಲಾ ಹಾಗೂ ತಾಲೂಕು ಕಸಾಪ ಅಧ್ಯಕ್ಷರಾದ ಶಿವಾನಂದ ಶೆಲ್ಲಿಕೇರಿ, ಸಂತೋಷ ತಳಕೇರಿ ಅವರನ್ನು ಭವ್ಯ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು.

ನಗರದ ಹಳೇ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಶಾಸಕ ನಾಡೋಜ ಜಗದೀಶ ಗುಡಗುಂಟಿ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಕನ್ನಡಾಂಬೆ ಭಾವಚಿತ್ರಕ್ಕೆ ಸಮ್ಮೇಳನಾಧ್ಯಕ್ಷ ವೇದಾಂತ ಆಚಾರ್ಯ ಸಹಜಾನಂದ ಅವಧೂತರು ಹಾಗೂ ಕೃಷ್ಣಾನಂದ ಅವಧೂತರು ಪೂಜೆ ಸಲ್ಲಿಸಿದರು.

ಜಾನಪದ ಸೊಗಡು: ಡೊಳ್ಳು ವಾದ್ಯ, ಸಂಬಾಳ, ಕರಡಿ ಮಜಲು, ಹಲಗಿ ಮೇಳ ಸೇರಿ ವಿವಿಧ ವಾದ್ಯಮೇಳಗಳು ನಗರದಲ್ಲಿ ಜಾನಪದ ಸೊಗಡನ್ನು ಪಸರಿಸಿ ನೋಡುಗರ ಗಮನ ಸೆಳೆದವು.
ಅಂಗನವಾಡಿ ಹಿರಿಯ ಮೇಲ್ವಿಚಾರಕಿ ಸುಭದ್ರಾ ಮಹಾಜನ್, ಡಿ.ಆರ್. ಅಥಣಿ ನೇತೃತ್ವದಲ್ಲಿ ಇಳಕಲ್ಲ ಹಾಗೂ ವಿವಿಧ ವರ್ಣದ ಸೀರೆಯನ್ನುಟ್ಟು ಕುಂಬ ಹೊತ್ತ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಮಹಿಳೆಯರು ಮೆರವಣಿಗೆಗೆ ಮೆರಗು ತಂದರು.

ಧ್ವಜಾರೋಹಣ: ಶಾಸಕ ನಾಡೋಜ ಜಗದೀಶ ಗುಡಗುಂಟಿ ರಾಷ್ಟ್ರಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಪರಿಷತ್ತಿನ ಧ್ವಜಾರೋಹಣ, ಕಸಾಪ ತಾಲೂಕು ಅಧ್ಯಕ್ಷ ಸಂತೋಷ ತಳಕೇರಿ ಕನ್ನಡ ಧ್ವಜಾರೋಹಣ ನೆರವೇರಿಸಿದರು.

ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ಜಿ.ಎಸ್. ನ್ಯಾಮಗೌಡ, ಹಿರಿಯ ನ್ಯಾಯವಾದಿ ಎನ್.ಎಸ್. ದೇವರವರ, ಶ್ರೀಶೈಲ ದಳವಾಯಿ, ಬಿ.ಟಿ. ಮಾಳಿ, ಸಿಡಿಪಿಒ ಎಸ್.ಸಿ. ಮ್ಯಾಗೇರಿ, ಸಹಾಯಕ ಸಿಡಿಪಿಒ ಆನಂದ ಪಿ., ಸುಶೀಲಕುಮಾರ ಬೆಳಗಲಿ, ಅಜಯ ಕಡಪಟ್ಟಿ, ಅನ್ವರ ಮೋಮಿನ್, ಸಿದ್ದು ಮೀಶಿ, ಯಮನೂರ ಮೂಲಂಗಿ, ಕುಶಾಲ ವಾಗ್ಮೋರೆ, ದಾನೇಶ ಘಾಟಗೆ, ಪಕೀರಸಾಬ ಬಾಗವಾನ, ದೇವಲ ದೇಸಾಯಿ, ನಾಗಪ್ಪ ಸನದಿ, ಡಾ.ಟಿ.ಪಿ. ಗಿರಡ್ಡಿ, ನಾಡೋಜ ಡಾ.ಎಚ್.ಜಿ. ದಡ್ಡಿ, ಎಂ.ಬಿ. ಇಂಡಿ, ಡಾ. ಶಾರದಾ ಮುಳ್ಳೂರ, ಚಂದ್ರಕಲಾ ಜನಗೌಡ, ವಿಮಲಾ ಕುಬಕಡ್ಡಿ, ರಾಜೇಶ್ವರಿ ಹಿರೇಮಠ, ಸುಮಿತ್ರಾ ಗುಳಬಾಳ, ಪುಷ್ಪಾ ಕರಣಿ, ಸಾವಿತ್ರಿ ಗೊರನಾಳ, ಪಿ.ಆರ್. ರಾಮತಾಳ, ಜಿ.ಎಸ್. ಸುತಾರ, ಶಂಕರ ಹಣಗಂಡಿ, ವಿನೋದ ಲೋಣಿ, ಶ್ರೀಶೈಲ ಜಂಬಗಿ ಮತ್ತಿತರರು ಮೆರವಣಿಗೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net