

ಉಡುಪಿ: ನಾಡಗೀತೆ ಅವಧಿ ಮತ್ತು ಸಂಗೀತ ಬಗ್ಗೆ ಅನೇಕ ಸಮಯದಿಂದ ಚರ್ಚೆಗಳಾಗುತ್ತಿದ್ದು, ಇದಕ್ಕೆ ತಾರ್ಕಿಕ ಅಂತ್ಯ ನೀಡಲಾಗುವುದು. ಜತೆಗೆ ರಾಜ್ಯವ್ಯಾಪಿ ಏಕರೂಪದ ಕನ್ನಡಾಂಬೆ ಚಿತ್ರ ಬಿಡುಗಡೆಗೆ ನಿಯಮ ರೂಪಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶುಕ್ರವಾರ ಯುವಜನ ಸೇವೆ, ಕನ್ನಡ ಮತ್ತು ಸಂಸ್ಕೃತಿ, ಶಿಕ್ಷಣ ಇಲಾಖೆಯ ಸಂಯುಕ್ತ ಸಭೆ ಕರೆಯಲಾಗಿದೆ. ಇದರಲ್ಲಿ ಜಯಂತಿ ಆಚರಣೆ ಸ್ವರೂಪ ಸಹಿತ ವಿವಿಧ ವಿಚಾರಗಳು ಚರ್ಚೆಗೆ ಬರಲಿದೆ. ದೇಶ ಭಕ್ತಿಯ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಸ್ವಾತಂತ್ರ್ಯ ದಿನ ಅಮೃತ ಮಹೋತ್ಸವ ಆಚರಣೆ ಹೇಗೆ ಮಾಡಬಹುದು ಎಂಬ ಬಗ್ಗೆ 15 ದಿನಗಳಲ್ಲಿ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಜನಾಶೀರ್ವಾದ ಇಲ್ಲದ ಕಾಂಗ್ರೆಸ್: ಜನರ ಆಶೀರ್ವಾದ ಕಳೆದುಕೊಂಡ ಹಾಗೂ ಜನರ ಭಾವನೆಗಳಿಂದ ದೂರವಾಗಿರುವ ಕಾಂಗ್ರೆಸ್ ಬಿಜೆಪಿ ಜನಾಶೀರ್ವಾದ ಯಾತ್ರೆ ಬಗ್ಗೆ ಮಾತನಾಡುತ್ತಿದೆ. ಅಫ್ಘಾನಿಸ್ತಾನವನ್ನು ಗಮನಿಸಿದಾಗ ದೇಶದ ನಾಯಕತ್ವ ನರೇಂದ್ರ ಮೋದಿಯಲ್ಲದೆ ಕಾಂಗ್ರೆಸ್ ಬಳಿಯಿದ್ದರೆ ದೇಶದ ಪರಿಸ್ಥಿತಿ ಬೇರೆಯೇ ಆಗುತ್ತಿತ್ತು ಎಂಬ ಆತಂಕ ಜನರಿಗಿದೆ ಎಂದರು.