ಸಾಹಿತ್ಯದೊಂದಿಗೆ ಕನ್ನಡದ ಕೆಲಸಕ್ಕಾಗಿ ಸಿದ್ಧ

06-08-Shiva-1
Published on

ರಾಯಚೂರು: ನಿಲುವು ಗಟ್ಟಿಯಾಗಿದ್ದಾಗ ಬರಹದಲ್ಲಿ ಗಟ್ಟಿತನ ಕಾಣಬಹುದು. ಬೇರೆಯವರು ಹೇಳುತ್ತಾರೆ ಎನ್ನುವ ಕಾರಣಕ್ಕೆ ಬರಹವನ್ನು ತಿದ್ದುವಂತಹ ಕೆಲಸ ಮಾಡಿದಾಗ ಬರಹಗಾರ ತನ್ನ ನಿಲುವಿಗೆ ಬದ್ಧನಾಗಿಲ್ಲವೆಂದು ಗೊತ್ತಾಗುತ್ತದೆ ಎಂದು ಹಿರಿಯ ಸಾಹಿತಿ ವೀರಹನುಮಾನ ಹೇಳಿದರು.

ಕನ್ನಡ ಭವನದಲ್ಲಿ ಬಷೀರ್ ಅಹ್ಮದ್ ಹೊಸಮನಿ ರಚಿತ ಅರ್ಜುನಾಯಣ ಕಥನ ಕಾವ್ಯ ಸಂಪುಟ ಬಿಡುಗಡೆ ಮಾಡಿ ಮಾತನಾಡಿದರು. ಬರಹದ ಬಗ್ಗೆ ಗಟ್ಟಿ ನಿಲುವು ಹೊಂದಿರುವ ಬಷೀರ್ ಅಹ್ಮದ್ ಅವರ ಕಥನ ಕಾವ್ಯದಲ್ಲಿ ಓದಿಸಿಕೊಂಡು ಹೋಗುವ ಶಕ್ತಿಯಿದೆ ಎಂದರು.

ಅರ್ಜುನ ನಡೆದ ದಾರಿಯ ವಿಷಯವಸ್ತು ಇಟ್ಟುಕೊಂಡು ಅರ್ಜುನಾಯಣ ಕಥನ ಕಾವ್ಯ ರಚಿಸಿದ್ದಾರೆ. ಸಾಹಿತ್ಯಕ್ಕಾಗಿ ಜೀವನ ಮುಡುಪಿಟ್ಟಿರುವ ಬಷೀರ ಅಹ್ಮದ್, ಇಂಗ್ಲಿಷ್ ನಾಮಫಲಕ ತೆರವುಗೊಳಿಸಲು ಹೋರಾಟ ನಡೆಸುವುದರ ಜತೆಗೆ ಕನ್ನಡದ ಕೆಲಸಕ್ಕಾಗಿ ಸದಾ ಸಿದ್ಧರಾಗಿರುತ್ತಾರೆ ಎಂದು ವೀರಹನುಮಾನ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಸಾಹಿತಿಗಳ ಕೊರತೆಯಿಲ್ಲ. ಅನೇಕ ಯುವ ಸಾಹಿತಿಗಳು ಕೃತಿಗಳನ್ನು ಹೊರತರುತ್ತಿದ್ದಾರೆ. ಕಿರಿಯರಿಗೆ ಹಿರಿಯ ಸಾಹಿತಿಗಳು ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದರು.

ಬಷೀರ್ ಅಹ್ಮದ್ ಅವರ ಕನ್ನಡ ಮೇಲಿನ ಪ್ರೀತಿ ಅತೀತವಾಗಿದೆ. ಜಿಲ್ಲೆಯಲ್ಲಿ ಕನ್ನಡ ಕ್ರಿಯಾ ಸಮಿತಿ ಮೂಲಕ ಕನ್ನಡಕ್ಕಾಗಿ ಹಲವಾರು ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಕನ್ನಡ ಅಂಕಿ-ಸಂಖ್ಯೆಗಳ ಬಳಕೆ ಬಗ್ಗೆ ಅವರಿಗಿರುವ ಕಾಳಜಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ರಂಗಣ್ಣ ಪಾಟೀಲ್ ಹೇಳಿದರು.

ಸಾಹಿತಿ ಈರಣ್ಣ ಬೆಂಗಾಲಿ ಮಾತನಾಡಿ, ಕನ್ನಡ ಸಾಹಿತ್ಯ ಲೋಕ ಸಂಪದ್ಭರಿತವಾಗಿದ್ದು, ಸಾಹಿತ್ಯ ಕ್ಷೇತ್ರಕ್ಕೆ ಜಿಲ್ಲೆಯ ಕೊಡುಗೆ ವಿಶೇಷವಾಗಿದೆ. ಯುವ ಸಾಹಿತಿಗಳು ಗಟ್ಟಿತನದ ಬರವಣಿಗೆ ಮೂಲಕ ರಾಜ್ಯದ ಗಮನ ಸೆಳೆಯುತ್ತಿದ್ದಾರೆ. ಕನ್ನಡ ಮಾತೃ ಭಾಷೆಯಲ್ಲದಿದ್ದರೂ ಕನ್ನಡವನ್ನು ಎದೆಯಲ್ಲಿ ತುಂಬಿಕೊಂಡಿರುವುದನ್ನು ಕಾಣುತ್ತೇವೆ. ಅಂತಹವರಲ್ಲಿ ಬಷೀರ್ ಅಹ್ಮದ್ ಕೂಡಾ ಒಬ್ಬರಾಗಿದ್ದು, ಅವರ ಅರ್ಜುನಾಯಣ ಕೃತಿಯಲ್ಲಿ ಪಾತ್ರಗಳು ಮಾತ್ರವಲ್ಲ ಕಥೆಯೂ ಮಾತನಾಡುತ್ತದೆ ಎಂದು ಹೇಳಿದರು.

ಸಾಹಿತಿಗಳಾದ ಬಾಗಲಕೋಟೆಯ ಡಾ.ಮೈನುದ್ದೀನ್ ರೇವಡಿಗಾರ, ಹೊಸಪೇಟೆಯ ಲಿಯಾಖತ್ ಅಲಿ ಹೊಸಮನಿ, ಅಯ್ಯಪ್ಪಯ್ಯ ಹುಡಾ, ಬಷೀರ್ ಅಹ್ಮದ್ ಹೊಸಮನಿ, ಹೊಸಮನಿ ಪ್ರಕಾಶನದ ಅಧ್ಯಕ್ಷೆ ಪರ್ವೀನ್ ಬೇಗಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net