

ಆಲ್ದೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ತವ್ಯ ವಾಟ್ಸ್ಆಪ್ ಗ್ರೂಪ್ ಸದಸ್ಯರು ಮೂಡಿಗೆರೆ ಎಂಜಿಎಂ ಆಸ್ಪತ್ರೆಯಿಂದ ಚಿಕ್ಕಮಗಳೂರಿನ ಕೆಫೆ ಕಾಫಿ ಡೇ ವರೆಗೆ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಒಟ್ಟು 27 ಕಿಮೀ ಮಹಾ ಸ್ವಚ್ಛತಾ ಅಭಿಯಾನ ನಡೆಸಿದರು.
ಆಲ್ದೂರಿನ ನಿಧಿ ಲವ ಹಾಗೂ ಹಾಂದಿ ಗ್ರಾಮದ ಸನ್ಮತಿ ದಿವ್ಯ ಪ್ರಸಾದ್ ಕರ್ತವ್ಯ ಎಂಬ ವಾಟ್ಸ್ಆಪ್ ಗ್ರೂಪ್ ಸದಸ್ಯರು ಸ್ವಚ್ಚತಾ ಅಭಿಯಾನಕ್ಕೆ ನೀಡಿದ ಕರೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ರೋಟರಿ ಸಂಸ್ಥೆ, ಲಯನ್ಸ್ ಸಂಸ್ಥೆ, ಜೆಸಿಐ ಸಂಸ್ಥೆ , ಸಚೇತನ ಯುವಕ ಸಂಘ, ಶಿವಗಿರಿ ತಂಡ ಒಟ್ಟು 250 ಜನ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು. ಒಟ್ಟು 16 ಟ್ರಾಕ್ಟರ್ ಹಾಗೂ 5 ಪಿಕ್ಅಪ್ ಕಸ ಸಂಗ್ರಹವಾಗಿದ್ದು ಇದರಲ್ಲಿ 11ಟ್ರಾಕ್ಟರ್ ಹಾಗೂ 4 ಪಿಕ್ಅಪ್ ಕಸವನ್ನು ಇಂದಾವರ ಹಾಗೂ 5 ಟ್ರಾಕ್ಟರ್1 ಪಿಕ್ಅಪ್ ಕಸವನ್ನು ಮೂಡಿಗೆರೆ ಕಸ ವಿಲೇವಾರಿ ಘಟಕಕ್ಕೆ ಕಳುಹಿಸಲಾಯಿತು.
ಕರ್ತವ್ಯ ಗ್ರೂಪ್ನ ನಿಧಿ ಹಾಗೂ ಸನ್ಮತಿ ಮಾತನಾಡಿ, ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಕರ್ತವ್ಯ. ಮತ್ತೆ ಈ ಭಾಗದಲ್ಲಿ ಕಸ ಎಸೆದರೆ ತಕ್ಷಣ ಕರ್ತವ್ಯ ಗ್ರೂಪ್ನ ಸದಸ್ಯರಿಗೆ ಮಾಹಿತಿ ನೀಡಿದರೆ ಕಸ ಎಸೆದವರನ್ನು ಗುರುತಿಸಿ ಕ್ರಮ ಕೈಗೊಳ್ಳಲು ಸಹಕಾರಿಯಾಗುತ್ತದೆ. ಸಾರ್ವಜನಿಕರು ನಮ್ಮ ಜತೆ ಕೈಜೋಡಿಸಬೇಕು ಎಂದು ಕರೆ ನೀಡಿದರು.