

ತೇರದಾಳ: ಅಲ್ಲಮಪ್ರಭು ತಮ್ಮ ವಚನವೊಂದರಲ್ಲಿ 160 ಲಕ್ಷ ವಚನ ಬರೆದಿರುವುದಾಗಿ ಹೇಳಿದ್ದರು. ಇಲ್ಲಿಯವರೆಗೆ ನಮಗೆ 22500 ವಚನಗಳು ಮಾತ್ರ ದೊರೆತಿವೆ. ಕನ್ನಡದ ವಚನಗಳನ್ನು ಪ್ರಧಾನಿ ನರೇಂದ್ರ ಮೋದಿ 22 ಭಾಷೆಗಳಿಗೆ ಭಾಷಾಂತರಗೊಳಿಸಲು ಕ್ರಮ ಕೈಗೊಂಡಿರುವುದು ಕನ್ನಡಿಗರಾದ ನಮಗೆಲ್ಲ ಹೆಮ್ಮೆ ವಿಷಯ ಎಂದು ಬೆಳಗಾವಿ ಜಿಲ್ಲೆ ಶೇಗುಣಸಿ ವಿರಕ್ತಮಠದ ಡಾ. ಮಹಾಂತ ಶ್ರೀಗಳು ಹೇಳಿದರು.
ತೇರದಾಳದ ವಿರಕ್ತಮಠದಲ್ಲಿ ಶಿವಲಿಂಗೇಶ್ವರರ 20ನೇ ಪುಣ್ಯಾರಾಧನೆ ನಿಮಿತ್ತ ಶುಕ್ರವಾರ ಹಮ್ಮಿಕೊಂಡ 501 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಮ್ಮ ನೆಲದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಅಚ್ಚುಕಟ್ಟಾಗಿ ಮುಂದುವರಿಸುವ ಗುರುತರ ಜವಾಬ್ದಾರಿ ತಾಯಂದಿರ ಮೇಲಿದೆ. ಹಾಗಾಗಿ ನಾವೆಲ್ಲ ಮಹಿಳೆಯರನ್ನು ಪೂಜ್ಯನೀಯ ಸ್ಥಾನದಲ್ಲಿಟ್ಟಿದ್ದೇವೆ ಎಂದರು.
ಡಾ. ಮಹಾವೀರ ದಾನಿಗೊಂಡ ಮಾತನಾಡಿ, ಸಂಸ್ಕಾರ, ಶಿಕ್ಷಣ ಎರಡನ್ನು ಸಮನಾಗಿ ಈ ಸಮಾಜಕ್ಕೆ ಕೊಡುವಲ್ಲಿ ಮಠ-ಮಾನ್ಯಗಳ ಪಾತ್ರ ದೊಡ್ಡದು. ತಾಯಂದಿರು ಕೂಡ ಈ ನಿಟ್ಟಿನಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸುವ, ರೂಢಿಸುವ ಕೆಲಸ ಮಾಡಲಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಂದಿಗುಂದದ ಶಿವಾನಂದ ಶ್ರೀಗಳು ಮಾತನಾಡಿ, ಮಕ್ಕಳಿಗೆ ಸಂಸ್ಕಾರ ಕಲಿಸುವಲ್ಲಿ ಮನೆ ಹಾಗೂ ತಾಯಿ ಪಾತ್ರ ದೊಡ್ಡದು. ಈ ದೇಶದ ಸಂಸ್ಕೃತಿ, ಪರಂಪರೆ ಉಳಿದರೆ ಮಾತ್ರ ನಮಗೆ ಉಳಿಗಾಲವಿದೆ. ಎಲ್ಲ ಧಾರ್ಮಿಕ ಕಾರ್ಯಕ್ರಮದಲ್ಲೂ ಮಹಿಳೆಯರಿಗೆ ಮೊದಲ ಆದ್ಯತೆ ಕೊಡುವುದು ನಮ್ಮೆಲ್ಲರ ಬದ್ಧತೆ ಎಂದರು.
ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯ ಶ್ರೀಗಳು ಆಶೀರ್ವದಿಸಿದರು. ತೇರದಾಳ ವಿರಕ್ತಮಠದ ಶಿವಕುಮಾರ ದೇವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ವಿರಕ್ತಮಠದ ಟ್ರಸ್ಟ್ ಅಧ್ಯಕ್ಷ ನಿಂಗಪ್ಪ ಮಾಲಗಾಂವಿ, ಉಪಾಧ್ಯಕ್ಷ ಮಗಯ್ಯ ತೆಳಗಿನಮನಿ ವೇದಿಕೆಯಲ್ಲಿದ್ದರು. ಮಲ್ಲಪ್ಪ ಜಮಖಂಡಿ, ಯಮನಪ್ಪ ಮುಕುಂದ, ಈರಪ್ಪ ಮದಲಮಟ್ಟಿ, ಜಗದೀಶ ಮುಕುಂದ, ನಿಂಗಪ್ಪ ಮಲಾಬದಿ, ಗುರುಬಸು ಹುಕ್ಕೇರಿ, ಶಿವಲಿಂಗ ಭದ್ರಶೆಟ್ಟಿ, ಬಸಪ್ಪ ಮುಕುಂದ, ರಮೇಶ ಅವರಾದಿ ಸೇರಿದಂತೆ ಪುರಸಭೆ ಸದಸ್ಯರು, ಶಿವಾನುಭವ ತಂಡ, ಅಕ್ಕನ ಬಳಗ, ಪ್ರಭುಲಿಂಗೇಶ್ವರ ಅನ್ನಪ್ರಸಾದ ಸಮಿತಿಯವರು ಉಪಸ್ಥಿತರಿದ್ದರು.
501 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಅಧಿಕ ಸುಮಂಗಲೆಯರು ಆಗಮಿಸಿದ್ದರಿಂದ ಎಲ್ಲರಿಗೂ ಉಡಿ ತುಂಬಲಾಯಿತು. ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರು ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದರು. ವಿರಕ್ತಮಠದಲ್ಲಿ ಶಿವಲಿಂಗೇಶ್ವರರ 20ನೇ ಪುಣ್ಯಾರಾಧನೆ ನಿಮಿತ್ತ ಸೆ. 9ರಿಂದ ಪ್ರತಿದಿನ ಸಂಜೆ ಬೇವಿನಹಾಳದ ಶ್ರವಣಕುಮಾರ ಶಾಸಿಗಳಿಂದ ಪ್ರವಚನ ಕಾರ್ಯಕ್ರಮ ನಡೆದಿದ್ದು, ಸೆ.19ರವರೆಗೆ ಸಾಗಲಿದೆ.
ಈ ಕಾರ್ಯಕ್ರಮದ ನಿಮಿತ್ತ ಸೆ.14ರಂದು ನಿವೃತ್ತ ಸೈನಿಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಭಾನುವಾರ ಪೂಜ್ಯರು ಹಾಗೂ ಹಿರಿಯ ಚೇತನಗಳಿಗೆ ಸನ್ಮಾನ ಸಮಾರಂಭ ಜರುಗಲಿದೆ. ಸೋಮವಾರ ಧರ್ಮಸಭೆ ಹಾಗೂ ಪ್ರವಚನ ಮಹಾಮಂಗಲ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ಜರುಗುವ ಪ್ರವಚನ ಕಾರ್ಯಕ್ರಮಕ್ಕೆ ಸರದಿಯಂತೆ ಭಕ್ತರು ಪ್ರಸಾದ ವ್ಯವಸ್ಥೆ ಮಾಡಿದ್ದಾರೆ.