

ಬಾಕಿ ಇರುವ 47 ತಿಂಗಳ ಫೆಲೋಶಿಪ್ ಬಿಡುಗಡೆಗೆ ಆಗ್ರಹ
ಹೊಸಪೇಟೆ: ಬಾಕಿ ಇರುವ ಫೆಲೋಶಿಪ್ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಇಲ್ಲಿನ ಕನ್ನಡ ವಿಶ್ವವಿದ್ಯಾಲಯ ಆವರಣದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಭಾನುವಾರ ಅಹೋರಾತ್ರಿ ಧರಣಿ ಆರಂಭಿಸಿದರು.
ಕನ್ನಡ ವಿಶ್ವವಿದ್ಯಾಲಯದ ೨೯೨ ಸಂಶೋಧನಾರ್ಥಿಗಳಿಗೆ ಮಾಸಿಕ ತಲಾ ೧೦ ಸಾವಿರ ರೂ. ಶಿಷ್ಯ ವೇತನ ಬರಬೇಕು. ಅನುದಾನದ ಕೊರತೆಯ ನೆಪವೊಡ್ಡಿ ೪೭ ತಿಂಗಳಿಂದ ಫೆಲೋಶಿಪ್ ನೀಡಿಲ್ಲ. ಸರ್ಕಾರ ಫೆಲೋಶಿಪ್‌ಗಾಗಿ ಮಂಜೂರು ಮಾಡಿದ್ದ ಹತ್ತಾರು ಕೋಟಿ ರೂ.ಗಳನ್ನು ಕನ್ನಡ ವಿಶ್ವವಿದ್ಯಾಲಯ ಅನ್ಯ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಏಪ್ರಿಲ್‌ನಲ್ಲಿ ಕನ್ನಡ ವಿಶ್ವವಿದ್ಯಾಲಯಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಂಶೋಧನಾರ್ಥಿಗಳ ಸಮಸ್ಯೆಯನ್ನು ಆಲಿಸಿ, ೨೦ ಕೋಟಿ ರೂ. ಅನುದಾನವನ್ನು ಘೋಷಣೆ ಮಾಡಿದ್ದರು. ಅದರಲ್ಲಿ ವಿದ್ಯಾರ್ಥಿಗಳ ಫೆಲೋಶಿಫ್, ತಾತ್ಕಾಲಿಕ ನೌಕರರ ಸಂಬಳಕ್ಕೆ ಬಳಸಿಕೊಳ್ಳಬೇಕು. ಉಳಿಕೆ ಅನುದಾನವನ್ನು ಇತರೆ ಕಾಮಗಾರಿಗಳಿಗೆ ಕೈಗೊಳ್ಳಬೇಕು ಎಂದು ತಿಳಿಸಿದ್ದರು. ಆದರೆ, ಆ ಅನುದಾನವನ್ನು ಸಂಪೂರ್ಣವಾಗಿ ವಿವಿಧ ಕಾಮಗಾರಿಗಳಿಗೆ ಕ್ರಿಯಾಯೋಜನೆ ಸಿದ್ಧಪಡಿಸಿದ್ದರು. ಅದಕ್ಕೆ ಆಕ್ಷೇಪಿಸಿದರೂ, ಕುಲಪತಿ ಮತ್ತು ಕುಲಸಚಿವರು ಕಿವಿಗೊಡಲಿಲ್ಲ ಎಂದು ದೂರಿದರು.
ಆ ನಂತರ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ತಮ್ಮ ವಿವೇಚನಾನುದಾನದಲ್ಲಿ ಬಿಡುಗಡೆ ಮಾಡಿದ್ದ ೧೫.೫೮ ಕೋಟಿ ರೂ. ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ೧೧.೮೯ ಕೋಟಿ ರೂ. ಆರ್ಥಿಕ ಸಹಾಯಧನ ನೀಡುವಂತೆ ಆದೇಶಸಿದ್ದಾರೆ. ಆದರೆ, ಕನ್ನಡ ವಿಶ್ವವಿದ್ಯಾಲಯದ ಅಧಿಕಾರಿಗಳು ಈ ಬಗ್ಗೆ ನಮಗೆ ಆದೇಶವೇ ಬಂದಿಲ್ಲವೆಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಈ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ದೂರವಾಗುವಂತೆ ಮಾಡುತ್ತಿದ್ದಾರೆ. ಈ ಕೂಡಲೇ ಉನ್ನತ ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿಗಳು ಗಮನಿಸಿ, ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.
ವಿರೂಪಾಕ್ಷ, ಎರ್ರಿಸ್ವಾಮಿ, ನಾಗರಾಜು, ವೀರಭದ್ರಪ್ಪ, ಮಣಿಕಂಠ, ಮಹೇಶ, ಬಸವರಾಜ ಚವ್ಹಾಣ, ಲಕ್ಷ್ಮಣ, ಅನಿಲ್ ಕುಮಾರ, ಅಭಿಲಾಶ, ಸಾವಿತ್ರಿ, ಕವಿತಾ, ಮಂಜಮ್ಮ, ನಿಖಿಲಾದೇವಿ ಅನೇಕರು ಪಾಲ್ಗೊಂಡಿದ್ದರು.