

ಹೂವಿನಹಡಗಲಿ: ತಾಲೂಕಿನ ನಂದಿಹಳ್ಳಿಯಲ್ಲಿ ವಿಜಯನಗರ ಸಾಮ್ರಾಜ್ಯದ ನಂತರದ ಶಾಸನೋಕ್ತ ಲಿಂಗಮುದ್ರೆ ಕಲ್ಲು ಕನ್ನಡ ವಿಶ್ವವಿದ್ಯಾಯಲದ ಶಾಸನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅಮರೇಶ ಯತಗಲ್ ಅವರು ಪತ್ತೆಹಚ್ಚಿದ್ದಾರೆ.
ಗ್ರಾಮದ ಹೊಳಗುಂದಿ ರಸ್ತೆಯ ಬಲಭಾಗದ ತೋಟದಲ್ಲಿರುವ ಬೇವಿನಮರದ ಕೆಳಗೆ ಶಾಸನೋಕ್ತ ಲಿಂಗಮುದ್ರೆ ಕಲ್ಲು ದೊರೆತಿದೆ. ಇದು 3 ಅಡಿ ಉದ್ದ ಹಾಗೂ 1.1/2 ಅಡಿ ಅಗಲ ಇದೆ. ಶಾಸನದಲ್ಲಿ ಏಳು ಸಾಲುಗಳಿದ್ದು, ಸ್ಥಳೀಯವಾಗಿ ದೊರೆಯುವ ಕಣ ಶಿಲೆಯಲ್ಲಿ ಕೆತ್ತನೆ ಮಾಡಲಾಗಿದೆ.
ವಿಶೇಷತೆ ಏನು: ಶಾಸನದಲ್ಲಿ ಕ್ರೋಧನ ಸಂವತ್ಸರ ಮಾರ್ಗಶಿರ ಬಹುಳ 10ರಲ್ಲಿ ಸೊಗೆಯ ನೂರೊಂದು ಅಯ್ಯನವರ ವಿರಕ್ತಮಠಕ್ಕೆ ಬಸವಪ್ಪಯ್ಯ ರಾಯರ ಆಜ್ಞೆಯಂತೆ ಕೆಂಚಣ್ಣಗೌಡ ಭೂಮಿಯನ್ನು ದಾನವಾಗಿ ನೀಡಿದ ಉಲ್ಲೇಖವಿದೆ. ಶಾಸನದಲ್ಲಿ ಉಲ್ಲೇಖವಾಗಿರುವ ವಿರಕ್ತಮಠವು ನಂದಿಹಳ್ಳಿ ಗ್ರಾಮದ ಮಧ್ಯಭಾಗದ ವಾಯುವ್ಯ ದಿಕ್ಕಿಗಿರುವ ಪ್ರದೇಶವೇ ಆಗಿರಬಹುದು ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ.
ಮಠದ ಅವಶೇಷಗಳು ಸಂಪೂರ್ಣವಾಗಿ ನೆಲಸಮವಾಗಿದ್ದು, ಪ್ರಸ್ತುತ ರಂಗಮಂಟಪದ ವೇದಿಕೆಯಾಗಿ ಬಳಿಕೆಯಾಗುತ್ತಿದೆ. ಶಾಸನದಲ್ಲಿ ದಾನದ ಭೂಮಿಯ ಪ್ರಮಾಣ ಹಾಗೂ ಶಕವರ್ಷದ ಉಲ್ಲೇಖವಿಲ್ಲ. ಆದರೆ ಶಾಸನದ ಲಿಪಿಯ ಲಕ್ಷಣದ ಆಧಾರದ ಮೇಲೆ ಇದರ ಕಾಲವು ಕ್ರಿ.ಶ.17ನೇ ಶತಮಾನಕ್ಕೆ ಸೇರಿರಬಹುದು ಎಂದು ಸಂಶೋಧಕರು ತಿಳಿಸಿದರು.
ಶಾಸನವು ಮಣ್ಣಲ್ಲಿ ಸವೆದಿರುವುದರಿಂದ ಕೆಲವೊಂದು ಕಡೆ ಅಕ್ಷರಗಳು ಅಳಿಸಿ ಹೋಗಿವೆ. ಶೈವರಿಗೆ ದಾನ ನೀಡಿದ ಭೂಮಿಯನ್ನು ಗುರುತಿಸಲು ಶಿವಲಿಂಗದ ಚಿತ್ರವುಳ್ಳ ಕಲ್ಲುಗಳನ್ನು ನೆಡುತ್ತಿದ್ದರು. ಅಂತಹ ಕಲ್ಲುಗಳೇ ಲಿಂಗಮುದ್ರೆ ಕಲ್ಲುಗಳು. ಎರಡು ಅಡಿಗಳಿಂದ ಮೂರು ಅಡಿಗಳಷ್ಟು ಎತ್ತರವಾಗಿರುತ್ತವೆ. ಶಾಸನದ ಮಧ್ಯಭಾಗ ಅಥವಾ ಮೇಲಿನ ಭಾಗದಲ್ಲಿ ಶಿವಲಿಂಗವನ್ನು ಅಕ್ಕಪಕ್ಕದಲ್ಲಿ ಸೂರ್ಯ, ಚಂದ್ರ ಆಕಾರವನ್ನು ಕೆತ್ತಲಾಗಿರುತ್ತದೆ. ಬಹುತೇಕ ಲಿಂಗಮುದ್ರೆ ಕಲ್ಲುಗಳು ಶಾಸನ ರಹಿತವಾಗಿದ್ದು, ರೇಖೆಯಲ್ಲಿಯೇ ಚಿತ್ರಿತವಾಗಿರುತ್ತವೆ. ಶಾಸನೋಕ್ತ ಲಿಂಗಮುದ್ರೆಕಲ್ಲುಗಳು ಹಾಗೂ ಉಬ್ಬುಶಿಲ್ಪದ ರೂಪದವು ಅವು ಬಹು ಅಪರೂಪವಾಗಿ ದೊರೆಯುತ್ತವೆ ಎಂದು