ಮರಾಠಿಗರ ಪುಂಡಾಟಿಕೆಗೆ ಆಕ್ರೋಶ: ಕನ್ನಡ ಒಕ್ಕೂಟ-ಕರ್ನಾಟಕ ರಾಜ್ಯ ಸಂಘಟನೆಯಿಂದ ಪ್ರತಿಭಟನೆ

Kannada Union-Karnataka State Organization Protest Mandya
Published on

ಮಂಡ್ಯ: ಮರಾಠಿಗಳ ಪುಂಡಾಟಿಕೆ ವಿರೋಧಿಸಿ ಮಾ.22ರಂದು ಕರೆ ನೀಡಿರುವ ಅಖಂಡ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕನ್ನಡ ಒಕ್ಕೂಟ-ಕರ್ನಾಟಕ ರಾಜ್ಯ ಸಂಘಟನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಹೋರಾಟಗಾರ ವಾಟಾಳ್ ನಾಗರಾಜ್ ಮಾತನಾಡಿ, ಕಳೆದ ಮೂರು ವರ್ಷದಿಂದಲೂ ಸದನದಲ್ಲಿ ರಾಜ್ಯಪಾಲರು ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದರೂ ಯಾವುದೇ ಶಾಸಕರು ಅಥವಾ ಸಚಿವರು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡಿಲ್ಲ. ಕರ್ನಾಟಕ ರಾಜ್ಯ ಮತ್ತು ಕನ್ನಡಿಗರನ್ನು ಕೇಳುವವರೇ ಇಲ್ಲದಾಗಿದೆ. ಸದನದಲ್ಲಿ ಹಿಂದಿ ಮಾತನಾಡಿದರೂ ಪ್ರಶ್ನಿಸುವವರಿಲ್ಲ. ಜೆ.ಎಚ್. ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಖುರ್ಷಿದ್ ಆಲಂಖಾನ್ ಅವರು ಹಿಂದಿಯಲ್ಲಿ ಮಾತನಾಡುವಾಗ ನಾನು ವಿರೋಧಿಸಿದ್ದೆ. ನನ್ನ ಗದ್ದಲದಿಂದ ಬೇಸತ್ತು ರಾಜ್ಯಪಾಲರು ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೊರ ನಡೆದಿದ್ದರು. ಆದರೆ ಇಂತಹ ಎದೆಗಾರಿಕೆಯನ್ನು ಇಂದಿನ ಜನಪ್ರತಿನಿಧಿಗಳು ಬೆಳೆಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯಪಾಲರಾದವರು ಇನ್ನು ಮುಂದೆ ಕನ್ನಡದಲ್ಲೇ ಮಾತನಾಡಬೇಕು. ಹಿಂದಿಯಲ್ಲಿ ಬರೆದುಕೊಂಡು ಸ್ವಲ್ಪವಾದರೂ ಕನ್ನಡದಲ್ಲಿ ಮಾತನಾಡಿ. ಬೆಳಗಾವಿಯಲ್ಲಿ ಸಾರಿಗೆ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಇಲ್ಲಿ ಮುಂದೆ ಕನ್ನಡಿಗರಿಗೆ ಮಾರ್ವಾಡಿಗಳು, ಗುಜರಾತಿಗಳು, ಸಿಂಧುಗಳು, ಮಲೆಯಾಳಿ, ತಮಿಳು, ತೆಲುಗು ಹಾಗೂ ಮರಾಠಿಗರು ಸಹ ಕನ್ನಡಿಗರ ಮೇಲೆ ಹಲ್ಲೆ ನಡೆಸಿದರೆ ಅಚ್ಚರಿಪಡಬೇಕಿಲ್ಲ. ಮರಾಠಿಗರ ಪುಂಡಾಟಿಕೆ, ಮರಾಠಿಗರ ಅಟ್ಟಹಾಸ ಹೆಚ್ಚಾಗಿದ್ದು, ಎಂಇಎಸ್ ನಿಷೇಧ ಮಾಡಬೇಕು. ಕಳಸಾ ಬಂಡೂರಿ ಮಹದಾಯಿ ಯೋಜನೆ ಕೂಡಲೇ ಆರಂಭ ಮಾಡಬೇಕು. ಹಿಂದಿ ಹೇರಿಕೆ ಬೇಡ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಾಗಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾ.22ರಂದು ಅಖಂಡ ಕರ್ನಾಟಕ ಬಂದ್ ಮಾಡಲಾಗುವುದು ಎಂದು ತಿಳಿಸಿದರು.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡ ಕಲಿತು ಮಾತನಾಡಿ, ಇಲ್ಲವೇ ಕರ್ನಾಟಕ ಬಿಟ್ಟು ತೊಲಗಿ ಹೋರಾಟ ನಡೆಸಲಾಗುವುದು. ಅದೇ ರೀತಿ ಕನ್ನಡಿಗರ ಬೇಡಿಕೆಗಾಗಿ, ಕನ್ನಡಿಗರ ಉದ್ಯೋಗಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು. ಮಾ. 21ರಂದು ಬೆಂಗಳೂರಿನ ವುಡ್‌ಲ್ಯಾಂಡ್ ಹೊಟೆಲ್‌ನಲ್ಲಿ ಸಭೆ ನಡೆಸಿ ಮಾ.22ರಂದು ಟೌನ್‌ಹಾಲ್ ಬಳಿಯಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ ನಡೆಸಲಾಗುವುದು. ಅದೇ ರೀತಿ ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲೂ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ ಎಂದು ಹೇಳಿದರು.

ಮಾ.22ರಂದು ದಕ್ಷಿಣ ರಾಜ್ಯಗಳ ಸಭೆಯನ್ನು ಡಿಎಂಕೆ ಸ್ಟಾಲಿನ್ ಕರೆದಿದ್ದಾರೆ. ಅಲ್ಲಿ ನಮ್ಮ ಸರ್ಕಾರದವರೂ ಹೋಗುತ್ತಿದ್ದಾರೆ. ಮೇಕೆದಾಟು ಯೋಜನೆಗೆ ಅವಕಾಶ ಕೊಡಲಿಲ್ಲ. ಸ್ಟಾಲಿನ್ ಮುಂದೆ ಹೋಗಿ ಕುಳಿತುಕೊಳ್ಳುವುದಕ್ಕೆ ನಾಚಿಕೆ ಇಲ್ಲವೇ, ಯಾವುದೇ ಕಾರಣಕ್ಕೂ ಸ್ಟಾಲಿನ್ ಸಭೆಗೆ ಹೋಗಬಾರದು. ಸಭೆಯನ್ನು ಬಹಿಷ್ಕರಿಸಬೇಕು ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕುಮಾರ್, ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಮಹಾಂತಪ್ಪ, ಆನಂದ್, ಬೆಟ್ಟಹಳ್ಳಿ ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net