

ಬೆಳಗಾವಿ: ಕನ್ನಡ ಉಳಿದು ಬೆಳೆಯಬೇಕಾದರೆ ಹದಯದ ಭಾಷೆಯನ್ನಾಗಿ ಕಾಣಬೇಕು ಎಂದು ಮಹಾವೀರ ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲ ರವಿ ದಂಡಗಿ ಹೇಳಿದರು.
ಬೆಳಗಾವಿ ನಗರದ ಮಹಾವೀರ ಪಿ. ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎಸ್‌ಎಸ್‌ಎಸ್ ಸಮಿತಿ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಅಂತರ್ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳ ಜಾನಪದ ಗಾಯನ ಸ್ಪರ್ಧೆಯಲ್ಲಿ ಮಾತನಾಡಿದರು.
ಕನ್ನಡ ಭಾಷಾಭಿಮಾನ, ಗೌರವ ಹಾಗೂ ಹೆಮ್ಮೆ ಮೂಡಿಸಲು ಮಹಾವಿದ್ಯಾಲಯದಲ್ಲಿ ಪ್ರತಿ ವರ್ಷ ಕನ್ನಡ ಹಬ್ಬ ಆಚರಿಸಲಾಗುತ್ತಿದೆ ಎಂದರು.
ಸ್ಪರ್ಧೆ ಅಂಗವಾಗಿ ಜಾಥಾ ಜರುಗಿತು. ವಿದ್ಯಾರ್ಥಿಗಳು ಕನ್ನಡ ಪರ ಘೋಷಣೆ ಕೂಗಿದರು. ಪ್ರಾಂಶುಪಾಲರು, ಮತ್ತು ಅಧ್ಯಾಪಕರು ಭಾಗವಹಿಸಿದ್ದರು. ಶಾಲಾ ಹಾಗೂ ಕಾಲೇಜು ಆಡಳಿತ ಮಂಡಳಿಯ ಚೇರ್ಮನ್ ವಿನೋದ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ಸದಸ್ಯರಾದ ಅಶೋಕ ಕುಸನಾಳ, ಮಹಾವೀರ ಹರದಿ, ಎ.ಬಿ. ಪಾಟೀಲ ಜಾನಪದ ಗಾಯನಕ್ಕೆ ಚಾಲನೆ ನೀಡಿದರು. ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರವಿ ದಂಡಗಿ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಅನುರಾಧಾ ನಿರೂಪಿಸಿದರು. ಸ್ವರಾಂಜಲಿ ತಂಡ ಪ್ರಾರ್ಥನೆ ಮಾಡಿತು. ಬಿ.ಎಸ್. ಪಾಟೀಲ ವಂದಿಸಿದರು.