ಕನ್ನಡದ ಸಮನ್ವಯ ಕವಿ ಕಣವಿ

30 vikram 4
Published on

ಕನ್ನಡದ ಸಮನ್ವಯ ಕವಿ ಎಂದು ಖ್ಯಾತರಾದ ನಾಡೋಜ ಡಾ. ಚೆನ್ನವೀರ ಕಣವಿ ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳೊಲ್ಲಬ್ಬರು. ಅವರು ಕಾವ್ಯವೇ ಜೀವನ ಎಂದು ಬದುಕಿದ ಅಗ್ರಗಣ್ಯರು ಎಂದು ವಿಮರ್ಶಕ ಎಸ್​.ಆರ್​. ವಿಜಯಶಂಕರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ನಾಡೋಜ ಡಾ. ಚೆನ್ನವೀರ ಕಣವಿ ಮತ್ತು ಶಾಂತಾದೇವಿ ಕಣವಿ ದತ್ತಿ ನಿಮಿತ್ತ ಶನಿವಾರ ಆಯೋಜಿಸಿದ್ದ ಕನ್ನಡದ ಯುವ ಲೇಖಕರಿಗೆ ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆ ಮತ್ತು ಶಾಂತಾದೇವಿ ಕಣವಿ ಕಥಾ ಸ್ಪರ್ಧೆ ಬಹುಮಾನ ವಿತರಣೆ ಹಾಗೂ ವಿಶೇಷ ಉಪನ್ಯಾಸದಲ್ಲಿ ಚೆನ್ನವೀರ ಕಣವಿಯವರ ಕಾವ್ಯಚಿತ್ರಗಳಲ್ಲಿ ತಾತ್ವಿಕ ನೆಲೆಗಳು ಕುರಿತು ಮಾತನಾಡಿದರು.
ಡಾ. ಚೆನ್ನವೀರ ಕಣವಿ ಕಾವ್ಯದ ಶಕ್ತಿ ಭಾವನಾ ಪ್ರಧಾನವಾದುದು. ಅವರ ಕಾವ್ಯಗಳಲ್ಲಿ ವ್ಯಕ್ತಿತ್ವ ನಿರ್ಮಾಣ ನಿಸರ್ಗದ ರಮ್ಯತೆಯೇ ಪ್ರಧಾನ ಹಂಬಲಗಳಾಗಿವೆ. ಮಾನವೀಯತೆ, ಆದರ್ಶ ಹಾಗೂ ಸೌಜನ್ಯದ ತಾತ್ವಿಕ ಸಿದ್ಧಾಂತಗಳಿವೆ. ಪ್ರಕೃತಿಯ ವರ್ಣನೆ ಜತೆಗೆ ನವ್ಯ ವಿಷಯಗಳು ಅವರ ಕಾವ್ಯದಲ್ಲಿವೆ. ಬೆಳಕು ಅವರ ಕಾವ್ಯದ ಮೂಲವಾಗಿದೆ ಎಂದರು.
ಡಾ. ಲೋಹಿತ ನಾಯ್ಕರ ಬಹುಮಾನ ಪ್ರದಾನ ಮಾಡಿ ಮಾತನಾಡಿದರು. ಸ್ಪರ್ಧೆಯಲ್ಲಿ ಚಾಮರಾಜನಗರದ ಆರ್​. ದಿಲೀಪ್​ ಕುಮಾರ ಅವರ ಅಮತವಷಿರ್ಣಿ ಕಾವ್ಯ ಪ್ರಥಮ, ಯಾದಗಿರಿಯ ಮಹೇಶ್ವರಿ ಅಲ್ಕೂರ ಅವರ ಮೌನ ಅಳು ಕಾವ್ಯ ದ್ವೀತಿಯ, ಧಾರವಾಡದ ಕವಿತಾ ವೀರನಗೌಡ ಪಾಟೀಲ ತೃತೀಯ ಹಾಗೂ ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯಲ್ಲಿ ರೋಣದ ಡಾ. ಅಂದಯ್ಯ ಅರವಟಗಿಮಠರ ದೈವ ದೆವಗಳಾಚೆ ಕಥೆ ಪ್ರಥಮ, ಅನಂತ ಕುಣಿಗಲ್​ ಅವರ ಕಥೆ ದ್ವೀತಿಯ ಹಾಗೂ ಸಂಜೀವ ಜಗ್ಲಿ ಅವರ ಸಾಲಿ ಕಥೆ ತೃತೀಯ ಬಹುಮಾನ ಪಡೆದವು.
ಕಥಾ ವಿಭಾಗದ ನಿರ್ಣಾಯಕ ಶ್ರೀಧರ ಗಸ್ತಿ ಮಾತನಾಡಿದರು. ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಚಂದ್ರಕಾಂತ ಬೆಲ್ಲದ, ದತ್ತಿದಾನಿ ಶಿವಾನಂದ ಕಣವಿ, ಡಾ. ಶೈಲಜಾ ಅಮರಶೆಟ್ಟಿ, ಶಿವಾನಂದ ಭಾವಿಕಟ್ಟಿ, ಕರುಣಪ್ರಸಾದ ಕಣವಿ, ರಂಜನಾ ಗೋದಿ, ಡಾ. ಅಶೋಕ ಗೋದಿ, ಎಸ್​.ಎಂ. ಶಿವಪ್ರಸಾದ, ಡಾ. ಆನಂದ ಪಾಟೀಲ, ನಿಂಗಣ್ಣ ಕುಂಟಿ, ಸಿ.ಯು. ಬೆಳ್ಳಕ್ಕಿ, ನಿಂಗಪ್ಪ ಮಾಯಕೊಂಡ, ಮಹಾಂತೇಶ ನರೇಗಲ್​, ಬಿ.ಎಸ್​. ಶಿರೋಳ, ಕೆ.ಎಂ. ಅಂಗಡಿ, ಸಿ.ಎಸ್​. ಮಾಳವಾಡ, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಸತೀಶ ತುರಮರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net