

ವಿಜಯವಾಣಿ ಸುದ್ದಿಜಾಲ ಉಡುಪಿ
ಕನ್ನಡ ಮತ್ತು ತುಳು ಭಾಷೆಯ ನಾಟಕ ರಂಗ ಹಾಗೂ ಸಿನಿಮಾಗಳಲ್ಲಿ ಅಭಿನಯಿಸಿ ಜನಮನ ಗೆದ್ದಿರುವ ಉಡುಪಿ ಸಮೀಪದ ನಿಂಜೂರಿನ ಪ್ರೀತಮ್ ನಾಯಕ ಅವರಿಗೆ ಕನ್ನಡ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮುಂಬಯಿಯಲ್ಲಿರುವ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಆಡಿಟೋರಿಯಂನಲ್ಲಿ ಇತ್ತೀಚೆಗೆ ಮುಂಬಯಿ ಕಲಾ ಜಗತ್ತು ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ತೋನ್ಸೆ ವಿಜಯಕುಮಾರ್ ಶೆಟ್ಟಿ ಅವರು ಕನ್ನಡ ಸಿರಿ ಪ್ರಶಸ್ತಿ ಪ್ರದಾನ ಮಾಡಿದರು.
ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಸುರೇಂದ್ರಕುಮಾರ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಕೃಷ್ಣರಾಜ ಸುವರ್ಣ, ಕೋಶಾಧಿಕಾರಿ ಉತ್ತಮ ಶೆಟ್ಟಿಗಾರ್ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಪ್ರೀತಮ್ ನಾಯಕ ಅವರು 'ಅಮೋಘ ಹಿರಿಯಡ್ಕ' ತಂಡದ ಸಕ್ರಿಯ ಸದಸ್ಯರಾಗಿದ್ದು, ಸಂಸ್ಥೆಯ ನೇತೃತ್ವದಲ್ಲಿ ನಡೆದ ಹಲವಾರು ನಾಟಕಗಳಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ಉಡುಪಿ, ಕುಂದಾಪುರ, ಮಂಡ್ಯ ಮತ್ತು ಮೈಸೂರು ದಸರಾಗಳಲ್ಲಿ ಸತತ 14 ಪ್ರದರ್ಶನ ಕಂಡಿರುವ ರೈಲು ಭೂತ ನಾಟಕದಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದಾರೆ. ಸಂಗೀತದಲ್ಲೂ ಪ್ರೌಢಿಮೆ ಹೊಂದಿದ್ದು, ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿದ್ದಾರೆ.