

ಕುಶಾಲನಗರ:
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಕಾರದೊಂದಿಗೆ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮ 50 ಮತ್ತು 69 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ. 11 ರಂದು ಏಕಕಾಲದಲ್ಲಿ ಐದು ಸಾವಿರ ಜನರ ಕನ್ನಡ ಕಂಠ ಗಾಯನ ಕಾರ್ಯಕ್ರಮ ಅರ್ಥಪೂರ್ಣವಾಗಿ ಸಂಘಟಿಸುವ ಮೂಲಕ ಕನ್ನಡದ ಕಹಳೆಯನ್ನು ಮೊಳಗಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಪಟ್ಟಣದ ರಥಬೀದಿ ಮತ್ತು ಪ್ರವಾಸಿ ಮಂದಿರ( ಐ.ಬಿ.) ರಸ್ತೆಯಲ್ಲಿ ಎಲ್ಲರೂ ಜತೆಗೂಡಿ ಈÀ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಲು ಶನಿವಾರ ನಡೆದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕುಶಾಲನಗರದಲ್ಲಿ ಇದೇ ಮೊದಲ ಬಾರಿಗೆ ಏಕಕಾಲದಲ್ಲಿ ಐದು ಸಹಸ್ರ ಮಂದಿ ಒಂದೆಡೆ ಸೇರಿ ಕಂಠ ಗಾಯನ ಹಾಡುವ ಇಂತಹ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸುವ ಮೂಲಕ ಕನ್ನಡದ ಕಹಳೆಯನ್ನು ಮೊಳಗಿಸಲು ಸಹಕರಿಸಬೇಕು. ಕನ್ನಡ ಭಾಷೆ, ನಾಡು- ನುಡಿ, ಕಲೆ,ಸಂಸ್ಕೃತಿ, ಸಾಹಿತ್ಯ- ಪರಂಪರೆಯನ್ನು ಎತ್ತಿಹಿಡಿಯುವ ಕೆಲಸಕ್ಕೆ ಎಲ್ಲರೂ ಪ್ರೋತ್ಸಾಹಿಸಬೇಕು. ಎಲ್ಲಾ ಸಂಘ- ಸಂಸ್ಥೆಗಳು, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ಮತ್ತು ನಾಗರಿಕರು ಕೈಜೋಡಿಸಬೇಕು. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅವರನ್ನು ಆಹ್ವಾನಿಸಲಾಗುವುದು ಎಂದರು.
ಕಾರ್ಯಕ್ರಮದ ಸ್ವರೂಪದ ಬಗ್ಗೆ ಕುಶಾಲನಗರ ತಾಲೂಕು ಕ.ಸಾ.ಪ.ಅಧ್ಯಕ್ಷ ಕೆ.ಎಸ್. ನಾಗೇಶ್ ಮಾಹಿತಿ ನೀಡಿದರು. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಎಂ.ಪಿ. ಕೇಶವಕಾಮತ್, ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ತಹಸೀಲ್ದಾರ್ ಕಿರಣ್ ಗೌರಯ್ಯ ಹಾಗೂ ಉದ್ಯಮಿ ಎಂ.ಕೆ.ದಿನೇಶ್ ಅಗತ್ಯ ಸಲಹೆಗಳನ್ನು ನೀಡಿದರು.
ಜಿಲ್ಲಾ ಕ.ಸಾ.ಪ. ಸಮಿತಿಯ ಸದಸ್ಯೆ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ತಾಲೂಕು ಕ.ಸಾ.ಪ. ಕಾರ್ಯದರ್ಶಿ ಟಿ.ವಿ.ಶೈಲಾ, ಎಸ್.ನಾಗರಾಜ್, ಕೋಶಾಧಿಕಾರಿ ಕೆ.ವಿ.ಉಮೇಶ್, ಸಮಿತಿಯ ಪ್ರಮುಖರಾದ
ಎಂ.ಎನ್.ಕಾಳಪ್ಪ, ಬಿ.ಎಸ್. ಪರಮೇಶ್, ಡಿ.ಎಸ್. ಸೋಮಶೇಖರ್, ಟಿ.ಬಿ. ಮಂಜುನಾಥ್,
ವಿವಿಧ ಸಂಸ್ಥೆಗಳ ಪ್ರಮುಖರಾದ ದೀಪಾ ಪೂಜಾರಿ, ಟಿ.ಜಿ. ಪ್ರೇಮಕುಮಾರ್, ಜಕ್ರಿಯಾ, ಎಂ.ಡಿ. ಕೃಷ್ಣಪ್ಪ, ಎಸ್. ಶಾಂಭಶಿವಮೂರ್ತಿ, ಡಿ.ವಿ. ರಾಜೇಶ್, ನಾಸೀರ್, ಲತಾ ರಮೇಶ್, ಚಿತ್ರ ರಮೇಶ್, ರೋಶನ್ ಮತ್ತಿತರರು ಇದ್ದರು.