

ಎನ್.ಆರ್.ಪುರ: ಕನ್ನಡ ರಾಜ್ಯೋತ್ಸವ ನವೆಂಬರ್‌ಗೆ ಸೀಮಿತವಾಗದೆ ಪ್ರತಿ ನಿತ್ಯ ಕನ್ನಡ ನಿತ್ಯೋತ್ಸವ ಆಗಬೇಕು ಎಂದು ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢಶಾಲೆ ಮುಖ್ಯಶಿಕ್ಷಕ ಶ್ರೀಕಾಂತ್ ಹೇಳಿದರು.
ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಡೆದ ಮಕ್ಕಳಿಗೆ ಗಾದೆ ಹಾಗೂ ಒಗಟುಗಳ ರಸಪ್ರಶ್ನೆ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಗರಗಳಲ್ಲಿ ಬೇರೆ ರಾಜ್ಯದಿಂದ ಬಂದ ಬೇರೆ ಭಾಷಿಗರು ಕನ್ನಡ ಕಲಿಯದೆ ಅವರ ಭಾಷೆಯಲ್ಲೇ ಮಾತನಾಡುತ್ತಾರೆ. ಅವರು ಮೂರು ವರ್ಷ ಕನ್ನಡ ಕಲಿತರೆ ನೂರು ವರ್ಷದವರೆಗೂ ಅವರಿಗೆ ನಮ್ಮ ಕನ್ನಡ ಭಾಷೆ ಬರುತ್ತದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಈ ಹಿಂದೆ ಇದ್ದ ಒಗಟು, ಗಾದೆಗಳ ಉಳಿವಿಗಾಗಿ ಗ್ರಾಮೀಣ ಭಾಗದ ಶಾಲೆಗಳಲ್ಲಿ ಕನ್ನಡ ಗಾದೆ, ಒಗಟುಗಳ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಸರ್ಕಾರ ಕನ್ನಡ ಶಾಲೆಗಳಿಗೆ ಕಲಿತ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿ ತರಬೇಕು ಎಂದು ಒತ್ತಾಯಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಮಾತನಾಡಿ, ಕನ್ನಡ ಭಾವನೆ ಬೆಸೆಯುವ ಭಾಷೆಯಾಗಿದೆ. ಕನ್ನಡ ಭಾಷೆಯಲ್ಲಿ ಮಾತ್ರ ಬರೆದಿರುವುದನ್ನು ಓದಬಹುದು. ಓದಿದ್ದನ್ನು ಬರೆಯಬಹುದು. ಕನ್ನಡ ಭಾಷೆ ಲಿಪಿಗಳ ರಾಣಿ ಎಂದು ಕರೆಯಲಾಗುತ್ತಿದೆ.
ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ನಂದಿನಿ ಆಲಂದೂರು ಮಾತನಾಡಿ, ವಿದೇಶಿಯರು ವ್ಯಾಪಾರಕ್ಕೆ ಎಂದು ಭಾರತಕ್ಕೆ ಬಂದು ಇಂಗ್ಲಿಷ್ ಭಾಷೆ ಬಿಟ್ಟು ಹೋಗಿದ್ದಾರೆ. ಕನ್ನಡಿಗರು ಯಾವ ದೇಶದಲ್ಲಿದ್ದರೂ ಈಗಲೂ ಕನ್ನಡ ಪ್ರೀತಿಸುತ್ತಾರೆ.ಅಮೆರಿಕದಲ್ಲಿ ಪ್ರತಿ ವರ್ಷ ಅಕ್ಕ ಸಮ್ಮೇಳನ ನಡೆಸುತ್ತಾರೆ ಎಂದರು