'ಇತರ ಭಾಷಿಕರಿಗೂ ಕನ್ನಡ ಕಲಿಸುವಂತಾಗಬೇಕು'

'Kannada should be taught to other speakers too'
Published on

ಮಡಿಕೇರಿ:

ಕನ್ನಡಿಗರು ಇತರ ಭಾಷಿಕರಿಗೆ ಕನ್ನಡ ಕಲಿಸುವ ಔದಾರ್ಯ ತೋರಿದರೆ ಸಂಪೂರ್ಣ ಕರ್ನಾಟಕವೇ ಕನ್ನಡಮಯವಾಗುತ್ತದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅಭಿಪ್ರಾಯಪಟ್ಟರು. ಕೊಡಗು ವೈದ್ಯಕೀಯ ವಿಜ್ಞಾನ ಕಾಲೇಜು ಕ್ಯಾಂಪಸ್‌ನಲ್ಲಿ ಸೋಮವಾರ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕದಲ್ಲಿ ಉದ್ಯೋಗ, ವಿದ್ಯಾಭ್ಯಾಸ ಸಲುವಾಗಿ ಹೊರ ರಾಜ್ಯದ ಜನತೆ ಹೆಚ್ಚು ಬರುತ್ತಿದ್ದು ಅವರೊಂದಿಗೆ ನಾವು ಕನ್ನಡವನ್ನೇ ಮಾತನಾಡಿದರೆ ಅವರು ಕನ್ನಡ ಕಲಿಯುತ್ತಾರೆ. ಆ ಕಾರ್ಯವನ್ನು ಎಲ್ಲಾ ಕನ್ನಡಿಗರು ಅನುಸರಿಸಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಪ್ರಧಾನ ಸಂಚಾಲಕ ತೆನ್ನಿರ ಮೈನಾ ಮಾತನಾಡಿ ಕನ್ನಡ ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದ್ದು ಕನ್ನಡದ ಮೇಲೆ ಇತರ ಯಾವ ಭಾಷೆಯೂ ಆಕ್ರಮಣ ಮಾಡಲು ಸಾಧ್ಯವಿಲ್ಲ. ಅತಿ ಹೆಚ್ಚಿನ ಎಂಟು ಜ್ಞಾನಪೀಠ ಪ್ರಶಸ್ತಿ ಕನ್ನಡಕ್ಕೆ ದೊರಕಿರುವುದನ್ನು ಗಮನಿಸಿದರೆ ಕನ್ನಡದ ಹಿರಿಮೆ, ಗರಿಮೆಯನ್ನು ಊಹಿಸಬಹುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ. ಕೆ.ಬಿ. ಕಾರ್ಯಪ್ಪ ವಿದೇಶಿಯರು ಕೂಡ ಕನ್ನಡದ ಬಗ್ಗೆ ವ್ಯಾಮೋಹ ಹೊಂದಿ ಅನೇಕ ಕೃತಿಗಳನ್ನು ರಚಿಸಿದ್ದರು. ಜರ್ಮನ್ ರವರಾದ ರೆವರಂಡ್ ಫರ್ಡಿನ್ಯಾಂಡ್ ಕಿಟಲ್ ಕನ್ನಡ ಇಂಗ್ಲಿಷ್ ನಿಘಂಟು ರಚಿಸಿದ್ದನ್ನು ಗಮನಿಸಿದಾಗ ಕನ್ನಡ ವಿಶ್ವದ ಜನಪ್ರಿಯ ಭಾಷೆ ಎಂಬುದರ ಅರಿವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳ ಪರವಾಗಿ ಡಾ. ಮಂತರ್ ಗೌಡ ಮತ್ತು ತೆನ್ನಿರ ಮೈನಾ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಯಶಸ್ಸ್ ತಾನೇ ರಚಿಸಿದ ಡಾ. ಮಂತರ್ ಗೌಡ ಭಾವಚಿತ್ರವನ್ನು ನೀಡಿದರು.

ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ. ವಿಶಾಲ್ ಕುಮಾರ್, ಸಿ ಇ.ಒ. ಎ.ಎಲ್. ಸ್ವಾಮಿ, ಮಡಿಕೇರಿ ನಗರಸಭೆ ಸದಸ್ಯ ರಾಜೇಶ್ ಯಲ್ಲಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎನ್. ನಂಜುಂಡಯ್ಯ, ಡಾ. ರೂಪೇಶ್, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಡಾ. ಮಂಜುನಾಥ್ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಕೃಪಾ ಎನ್., ಸುಮಂತ್, ಪ್ರಜ್ಞಾ ಎ.ಎಸ್., ಶಶಾಂಕ್, ಅನುದೀಪ್ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net