

ರಾಯಚೂರು: ಕಲಿಕೆಗೆ ಯಾವುದೇ ಭಾಷೆಯನ್ನು ಕಲಿಯಿರಿ. ಆದರೆ ಕನ್ನಡ ನಮ್ಮೆಲ್ಲರ ಹೃದಯ ಭಾಷೆಯಾದಾಗ ಮಾತ್ರ ಕನ್ನಡವನ್ನು ಉಳಿಸಿ, ಬೆಳೆಸಲು ಸಾಧ್ಯವಾಗಲಿದೆ ಎಂದು ಹಿರಿಯ ಸಾಹಿತಿ ಪ್ರಸನ್ನ ಮಂಡಲಗಿರಿ ಹೇಳಿದರು.
ಸ್ಥಳೀಯ ಸರ್ ಎಂ.ವಿಶ್ವೇಶ್ವರಯ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಂಘದಿಂದ ಮಂಗಳವಾರ ಆಯೋಜಿಸಿದ್ದ ನಿರರ್ಗಳವಾಗಿ ಕನ್ನಡ ಓದು ಕಾರ್ಯಕ್ರಮದಲ್ಲಿ ಮಾತನಾಡಿ, ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲ ಎಲ್ಲರೂ ನಿರರ್ಗಳವಾಗಿ ಕನ್ನಡ ಮಾತನಾಡುವುದನ್ನು ಕಲಿಯಬೇಕಾಗಿದೆ ಎಂದರು.
ಸಹಜವಾಗಿ ನಾವು ಓದುವಾಗ, ಮಾತನಾಡುವಾಗ ಅಲ್ಪ ಪ್ರಾಣ, ಮಹಾಪ್ರಾಣ ಬಳಸುವುದರಲ್ಲಿ ಎಡವುತ್ತಿದ್ದೇವೆ. ಅದರಲ್ಲೂ ಕರ್ನಾಟಕದ ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ರೀತಿ ಕನ್ನಡ ಭಾಷೆಯ ಉಚ್ಛಾರಣೆ ಮಾಡಲಾಗುತ್ತಿದೆ. ಮಕ್ಕಳಿಗೆ ಪದ ಬಳಕೆ ಬಗ್ಗೆ ತಿಳುವಳಿಕೆ ನೀಡುವ ಕೆಲಸವಾಗಬೇಕು ಎಂದು ಹೇಳಿದರು.
ಎಸ್‌ಎಂವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜೆ.ಎಂ.ಶರಣಯ್ಯಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ ಸೊಗಸಾದ ಭಾಷೆಯಾಗಿದೆ. ಇಂದಿನ ಮಕ್ಕಳು ಕಲಿಕೆಯಲ್ಲಿ ಮುಂದೆ ಇದ್ದು, ಗುಣಮಟ್ಟದ ಶಿಕ್ಷಣ ಕೊಟ್ಟರೆ ಇನ್ನೂ ಉತ್ತಮವಾಗಿ ಬೆಳೆಯುತ್ತಾರೆ ಎಂದು ತಿಳಿಸಿದರು.
ನಿರರ್ಗಳವಾಗಿ ಕನ್ನಡ ಓದು ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕನ್ನಡ ಸಂಘದ ಅಧ್ಯಕ್ಷ ನಾಗರಾಜ ಪಲಗುಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘದ ಪದಾಕಾರಿಗಳಾದ ಸಂಗಮೇಶ ಮಂಗಾನವರ, ಡಾ.ವಿಜಯರಾಜೇಂದ್ರ, ಡಾ.ತಿಮ್ಮಯ್ಯ ಇಲ್ಲೂರು, ಬಿ.ಎಸ್.ಮಾಲತಿ, ಸೈಯದ್ ವಲಿ, ಬಷೀರ್ ಅಹ್ಮದ್ ಹೊಸಮನಿ ಉಪಸ್ಥಿತರಿದ್ದರು.