

ಮೈಸೂರು: ಮೂರು ಸಾವಿರ ವರ್ಷಗಳ ಸುದೀರ್ಘ ಚರಿತ್ರೆಯುಳ್ಳ ನಮ್ಮ ಕನ್ನಡ ಕರುಳ ಭಾಷೆಯಾಗಿದ್ದು, ಈ ಸುಂದರ, ಸುಲಲಿತ ಕನ್ನಡವು ಪ್ರತಿಯೊಬ್ಬರ ಕೊರಳ ಭಾಷೆಯಾಗಬೇಕೆಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.
ನಗರದ ವಿದ್ಯಾರಣ್ಯಪುರಂನ ವಾಣಿ ವಿದ್ಯಾಮಂದಿರ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದ ವತಿಯಿಂದ ಏರ್ಪಡಿಸಿದ್ದ ನುಡಿ ಸಂಭ್ರಮ ಸಮಾರಂಭದಲ್ಲಿ ಮಾತನಾಡಿದರು.
ಜೀವನಕ್ಕಾಗಿ ನಾವು ಎಷ್ಟೇ ಭಾಷೆಗಳನ್ನು ಕಲಿತರೂ ನಮ್ಮ ನೆಲದೊಡಲಿನ ಕನ್ನಡ ನುಡಿಯೇ ಪ್ರತಿಯೊಬ್ಬರಿಗೂ ಸರ್ವಸ್ವ. ತನ್ನ ಮುದ್ದು ಮುದ್ದಾದ ಸುಂದರ ಅಕ್ಷರಗಳಿಂದ ಲಿಪಿಗಳ ರಾಣಿ ಎಂದು ಕರೆಸಿಕೊಳ್ಳುವ ಕನ್ನಡ ಭಾಷೆ ಕಲಿಯುವವರಿಗೆ ಸುಲಿದ ಬಾಳೆಹಣ್ಣಿನಂತೆ ಅತ್ಯಂತ ಸುಲಭವಾಗಿದ್ದು ಕನ್ನಡೇತರರೂ ಬಹುಬೇಗ ಕನ್ನಡವನ್ನು ಕಲಿಯಬಹುದಾಗಿದೆ. ಅತ್ಯಂತ ಹೆಚ್ಚು ಎನ್ನುವಂತೆ ಸಾಹಿತ್ಯ ಕ್ಷೇತ್ರದಲ್ಲಿ ದಾಖಲಾರ್ಹ ಪ್ರತಿಷ್ಠಿತ ಎಂಟು ಜ್ಞಾನಪೀಠ ಪ್ರಶಸ್ತಿಗಳ ಸಾಹಿತ್ಯ ಸಾಧಕರನ್ನು ಪಡೆದಿರುವ ನಮ್ಮ ಕನ್ನಡಮ್ಮ, ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ಜಾನಪದ, ವಿಜ್ಞಾನ, ಧಾರ್ಮಿಕ, ಕೃಷಿ, ಕ್ರೀಡೆ, ರಾಜಕೀಯ, ವೈದ್ಯಕೀಯ, ತಂತ್ರಜ್ಞಾನ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನೂರಾರು, ಸಾವಿರಾರು ಸಾಧಕರನ್ನು ಸೃಷ್ಟಿಸಿದ್ದಾರೆ ಎಂದರು.
ಕನ್ನಡ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಇದರ ಮೂಲಕ ಏನು ಬೇಕಾದರೂ ಸಾಧಿಸ ಬಹುದೆಂಬುದನ್ನು ಕನ್ನಡದ ಸಾಧಕ ಮಹನೀಯರು, ಪ್ರತಿಭಾ ಸಂಪನ್ನರು ಈಗಾಗಲೇ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಕನ್ನಡ ಎಂದೂ ನಶಿಸದ ಜೀವಂತ ಭಾಷೆ. ಇದನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಸುವ ಹೊಣೆ ವಿದ್ಯಾರ್ಥಿಗಳು ಮತ್ತು ಯುವಜನರ ಮೇಲಿದ್ದು ಸರ್ವರ ತಾಯಿಯಾಗಿರುವ ಕನ್ನಡಮ್ಮನ ಸಂರಕ್ಷಿಸುವತ್ತ ಪ್ರತಿಯೊಬ್ಬ ಕನ್ನಡಿಗರೂ ಕ್ರಿಯಾಶೀಲರಾಗಬೇಕೆಂದು ತಿಳಿಸಿದರು.
ಇದೇ ವೇಳೆ ವೈದ್ಯೆ ಮತ್ತು ಕವಯತ್ರಿ ಡಾ.ಸ್ನೇಹಶ್ರೀ ಅವರನ್ನು ಸನ್ಮಾನಿಸಲಾಯಿತು. ಲೇಖಕಿ ಡಾ.ಜಮುನಾರಾಣಿ ಮಿರ್ಲೆ, ಕಾವೇರಿ ಬಳಗದ ಅಧ್ಯಕ್ಷೆ, ನಿವೃತ್ತ ಶಿಕ್ಷಕಿ ಎನ್.ಕೆ.ಕಾವೇರಿಯಮ್ಮ, ಶ್ರೀವಾಣಿ ವಿದ್ಯಾಮಂದಿರದ ಆಡಳಿತಾಧಿಕಾರಿ ಎಚ್.ಕೆ.ರಾಘವೇಂದ್ರರಾವ್, ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಮುಖ್ಯ ಶಿಕ್ಷಕ ಪರಶುರಾಮೇಗೌಡ, ಶಿಕ್ಷಕರಾದ ಶ್ರೀನಿವಾಸರಾವ್, ಎಂ.ಪ್ರಕಾಶ್, ಪವಿತ್ರಾ ಇದ್ದರು.