

ಮಂಡ್ಯ: ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಮಾಡಬೇಕೆಂದು ಒತ್ತಾಯಿಸಿ ಕನ್ನಡ ಸೇನೆ ಕಾರ್ಯಕರ್ತರು ನಗರಸಭೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಕಚೇರಿ ಆವರಣದಲ್ಲಿ ಜಮಾಯಿಸಿದ ಕಾರ್ಯಕರ್ತರು, ಧರಣಿ ನಡೆಸಿ ಆಯುಕ್ತ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು. ನಾಮಫಲಕದಲ್ಲಿ ಕನ್ನಡ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಈ ಬಗ್ಗೆ ವರ್ತಕರಿಗೆ ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಯುಕ್ತರು ನೋಟಿಸ್ ಜಾರಿ ಮಾಡಿದ್ದರೂ ಸಹ ಶೇ.30ರಷ್ಟು ಅಂಗಡಿ ಮುಗ್ಗಟ್ಟುಗಳಲ್ಲಿ ಬದಲಾವಣೆ ಮಾಡದಿರುವುದು ಕಂಡುಬಂದಿದ್ದು ವರ್ತಕರ ಧೋರಣೆ ಸರಿಯಲ್ಲ. ಕನ್ನಡದಲ್ಲಿ ನಾಮಫಲಕ ಹಾಕದ ವರ್ತಕರ ಪರವಾನಗಿ ರದ್ದುಗೊಳಿಸಬೇಕು. ವರ್ತಕರಿಗೆ 15 ದಿನ ಕಾಲಾವಕಾಶ ನೀಡಿ ಅಷ್ಟರೊಳಗೆ ಕನ್ನಡ ನಾಮಫಲಕ ಹಾಕುವಂತೆ ಸೂಚಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇನ್ನು ಮಾಜಿ ಸಂಸದ, ಕಾವೇರಿ ಹೋರಾಟಗಾರ ಡಾ.ಜಿ.ಮಾದೇಗೌಡರ ಹೆಸರನ್ನು ಮಂಡ್ಯ ನಗರದ ಪ್ರಮುಖ ರಸ್ತೆಗೆ ನಾಮಕರಣ ಮಾಡಬೇಕು ಹಾಗೂ ಅವರ ಪ್ರತಿಮೆ ಸ್ಥಾಪಿಸಬೇಕು. ಡೆಂೆ ಜ್ವರ ತೀವ್ರಗೊಳ್ಳುತ್ತಿರುವ ಹೊತ್ತಿನಲ್ಲಿ ಮಂಡ್ಯ ನಗರದ ಚಾಟ್ಸ್, ಪಾನೀಪುರಿ, ಗೋಬಿ ಮಂಜೂರಿ, ಜ್ಯೂಸ್ ಅಂಗಡಿಗಳಲ್ಲಿ ಶುಚಿಯಾದ ಆರೋಗ್ಯಕರವಾದ ಆಹಾರ ಮತ್ತು ಪಾನೀಯ ನೀಡಲು ನಗರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೊಳೆತ ಮತ್ತು ಯೋಗ್ಯವಿಲ್ಲದ ಆಹಾರ ಪದಾರ್ಥಗಳನ್ನು ಬಳಸುತ್ತಿರುವ ಅಂಗಡಿಗಳ ಪರವಾನಗಿ ರದ್ದು ಮಾಡಿ ಅಂಗಡಿಗಳಿಗೆ ಬೀಗ ಮುದ್ರೆ ಹಾಕಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಮಹಾಂತಪ್ಪ, ರವಿ, ಕಿರಣ್, ಶ್ರೀನಿವಾಸ್ ಇತರರಿದ್ದರು.