ತ.ನಾಡಿಗೆ ನೀರು ಹರಿಸುವಂತೆ ಆದೇಶ: ಖಾಲಿ ಕೊಡದೊಂದಿಗೆ ಕನ್ನಡಸೇನೆ ಪ್ರತಿಭಟನೆ

kannada sene cauvery protest mandya
Published on

ಮಂಡ್ಯ: ಕಾವೇರಿ ಕಣಿವೆ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನದಿ ನೀರು ನಿಯಂತ್ರಣಾ ಸಮಿತಿ ಆದೇಶ ಹೊರಡಿಸಿರುವುದನ್ನು ವಿರೋಧಿಸಿ ನಗರದಲ್ಲಿ ಕನ್ನಡಸೇನೆ ಕರ್ನಾಟಕ ಸಂಘಟನೆಯಿಂದ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಲಾಯಿತು.

ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಸದಸ್ಯರು ಹಾಗೂ ಕನ್ನಡಸೇನೆ ಕರ್ನಾಟಕ ಸಂಘಟನೆ ಕಾರ್ಯಕರ್ತರು ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಕೆಲವೊತ್ತು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಕಾವೇರಿ ಕಣಿವೆ ಜಲಾಶಯದಿಂದ ತಮಿಳುನಾಡಿಗೆ ಕಳೆದ ಎರಡು ತಿಂಗಳಿಂದ ನಿರಂತರವಾಗಿ ನೀರು ಹರಿಸಲಾಗುತ್ತಿದೆ. ಆದರೂ ಸಹ ಕಾವೇರಿ ನದಿ ನೀರು ನಿಯಂತ್ರಣಾ ಸಮಿತಿ ಅ.16 ರಿಂದ 31ರವರೆಗೆ ಪ್ರತಿನಿತ್ಯ 3000 ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಿದೆ. ಈ ಮೂಲಕ ಕಾವೇರಿ ಕೊಳ್ಳದ ರೈತರಗೆ ಅನ್ಯಾಯ ಮಾಡಿದೆ. ಇತ್ತ ರಾಜ್ಯಸರ್ಕಾರವೂ ಸಮರ್ಥ ವಾದ ಮಂಡಿಸುವಲ್ಲಿ ವಿಫಲವಾಗಿದೆ ಎಂದು ಆಕ್ಷೇಪಿಸಿದರು.

ನೆರೆ ರಾಜ್ಯಕ್ಕೆ ನೀರು ಬಿಟ್ಟ ಹಿನ್ನೆಲೆಯಲ್ಲಿ ಕಾವೇರಿ ಕಣಿವೆ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕುಸಿತಗೊಂಡಿದೆ. ಯಾವುದೇ ಕಾರಣಕ್ಕೂ ಸಮಿತಿಯ ಸೂಚನೆಯನ್ನು ಒಪ್ಪಬಾರದು. ಜತೆಗೆ ಕೂಡಲೇ ನೀರು ಹರಿಸುತ್ತಿರುವುದನ್ನು ನಿಲ್ಲಿಸಬೇಕು. ಮತ್ತೆ ನೀರು ಬಿಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ನಿರ್ಧರಿಸಿದರೆ ವಾಸ್ತವ ಪರಿಸ್ಥಿತಿ ಅರಿಯಲು ಕಾವೇರಿ ನದಿ ನೀರು ಪ್ರಾಧಿಕಾರ ಮುಂದಾಗಲಿದೆ. ಇಲ್ಲದಿದ್ದರೆ ನೀರು ಬಿಡುತ್ತಿರುವುದರಿಂದ ಯಾವುದೇ ಸಮಸ್ಯೆ ಇಲ್ಲವೆಂದು ತಿಳಿಯುತ್ತದೆ. ಹಾಗಾಗಿ ರಾಜ್ಯ ಸರ್ಕಾರ ಒಮ್ಮತದ ನಿರ್ಧಾರಕ್ಕೆ ಮುಂದಾಗಬೇಕು. ಮಾತ್ರವಲ್ಲದೆ ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ಮುಂದಾಗಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ವಾಸ್ತವ ಸ್ಥಿತಿ ಮನವರಿಕೆ ಮಾಡಿ ಮಧ್ಯಸ್ಥಿಕೆ ವಹಿಸಲು ಒತ್ತಾಯಿಸಬೇಕೆಂದರು.

ಪ್ರತಿಭಟನೆಯಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ಮಹಾಂತಪ್ಪ, ಇಂಡುವಾಳು ಬಸವರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net