ಅನುದಾನ ವಾಪಸ್ ಕೇಳಿದ್ದಕ್ಕೆ ಆಕ್ರೋಶ: ಕನ್ನಡಸೇನೆ ಸಂಘಟನೆ ಕಾರ್ಯಕರ್ತರ ಪ್ರತಿಭಟನೆ

Kannada Sena organization activists Protest Mandya
Published on

ಮಂಡ್ಯ: ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳಿಗೆಂದು ನೀಡಿರುವ ಅನುದಾನವನ್ನು ವಾಪಸ್ ಕೇಳುತ್ತಿರುವ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಕ್ರಮ ಕೈಬಿಡಬೇಕು ಎಂದು ಒತ್ತಾಯಿಸಿ ಕನ್ನಡ ಸೇನೆ ಸಂಘಟನೆಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕುಮಾರ ಅವರಿಗೆ ಮನವಿ ಪತ್ರ ನೀಡಿದ ಪ್ರತಿಭಟನಾಕಾರರು ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು. ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಟ್ಯಾಕ್ಸಿಯನ್ನು ಕೊಡಿಸಬೇಕು. ಬಹಳ ವರ್ಷದಿಂದ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಆಯ್ದ ವ್ಯಕ್ತಿಗಳಿಗೆ ಇಲಾಖೆಯಿಂದ 2 ಲಕ್ಷ ರೂವರೆಗೆ ಸಬ್ಸಿಡಿ ಯೋಜನೆಯಡಿ ಟ್ಯಾಕ್ಸಿ ನೀಡಲಾಗುತ್ತಿದೆ. ಉದ್ಯೋಗ ಸಮಸ್ಯೆ ತಲೆದೋರುತ್ತಿರುವ ಈ ಸಂದರ್ಭದಲ್ಲಿ ಜಿಲ್ಲೆಯ ಪ್ರವಾಸೋದ್ಯೋಮ ಇಲಾಖೆಗೆ ನೂರಾರು ಯುವಕರು ಅರ್ಜಿ ಸಲ್ಲಿಸಿರುತ್ತಾರೆ. ಅದರಲ್ಲಿ 45 ಜನರನ್ನ ಆಯ್ಕೆ ಮಾಡಿರುವವರಿಗೆ ತಕ್ಷಣ ಟ್ಯಾಕ್ಸಿ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ಅರ್ಜಿಯ ಪ್ರಸ್ತುತ ಹಂತದ ಕುರಿತು ಮಾಹಿತಿ ಪಡೆಯಲು ಜಿಲ್ಲಾ ಪ್ರವಾಸೋದ್ಯಮಕ್ಕೆ ಭೇಟಿ ನೀಡಿದಾಗ 2009-10ನೇ ಸಾಲಿನಿಂದ 2019-20ನೇ ಸಾಲಿನವರೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಜಿಲ್ಲೆಗೆ ಸರ್ಕಾರದಿಂದ ಮಂಜೂರಾಗಿರುವ ಗುರಿಗಳ ಪೂರ್ಣಗೊಳಿಸಿಲ್ಲ. ಇದರಿಂದಾಗಿ ಅನುದಾನವನ್ನು ಹಿಂದಿರುಗಿಸುವಂತೆ ರಾಜ್ಯ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರು ಪತ್ರ ಬರೆದಿದ್ದಾರೆ. ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ. ಸರ್ಕಾರ ಬಹಳಷ್ಟು ಅನುದಾನ ನೀಡುತ್ತಿದ್ದರೂ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತಿಲ್ಲ. ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಯೊಳಗೆ ಟ್ಯಾಕ್ಸಿ ’ಯೋಜನೆ ಪಡೆಯಲು ಅರ್ಜಿ ಸಲ್ಲಿಸಿರುವವರ ಭವಿಷ್ಯ ಏನಾಗಬೇಕು. ಈಗಾಗಲೇ 45 ಜನರು ಆಯ್ಕೆಯಾಗಿರುವ ಫಲಾನುಭವಿಗಳಿಗೆ ತಕ್ಷಣ ಚೆಕ್ ವಿತರಿಸಬೇಕು. ಒಂದು ವೇಳೆ ಹಣವನ್ನು ಸರ್ಕಾರಕ್ಕೆ ಹಿಂದಿರುಗಿಸಿದರೆ ಹೋರಾಟ ಮಾಡಬೇಕಾಗುತ್ತದೆ. ಸರ್ಕಾರ ಹಾಗೂ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಮಂಜುನಾಥ್, ರಾಜ್ಯ ಸಂಚಾಲಕ ಜಿ.ಮಹಾಂತಪ್ಪ, ಉಪಾಧ್ಯಕ್ಷ ಪ್ರಸನ್ನ, ಪ್ರಧಾನ ಕಾರ್ಯದರ್ಶಿ ಕೇಬಲ್ ಮಂಜು, ಕಾರ್ಯದರ್ಶಿಗಳಾದ ಮಂಡಿಬೆಟ್ಟಳ್ಳಿ ಮಂಜುನಾಥ್, ಶಿವು, ತಾಲೂಕು ಅಧ್ಯಕ್ಷ ಸುಂಕನಹಳ್ಳಿ ಸತೀಶ್, ನಗರಾಧ್ಯಕ್ಷ ಶಿವಾಲಿ, ಸಂಘಟನಾ ಕಾರ್ಯದರ್ಶಿ ಪವಿತ್ರಾ, ಸಂಚಾಲಕ ವೇಣುಗೋಪಾಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net