

ಮಂಡ್ಯ: ವಿಶ್ವವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆ ಸಮೀಪ ಅಮ್ಯೂಸ್ಮೆಂಟ್ ಪಾರ್ಕ್ ಹಾಗೂ ಕಾವೇರಿ ಆರತಿ ಯೋಜನೆ ವಿರೋಧಿಸಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ರಾತ್ರಿ ಹೊತ್ತಲ್ಲಿ ಕಾವೇರಿ ಆರತಿ ಯೋಜನೆಗೆ ವೇದಿಕೆ ನಿರ್ಮಾಣ ಮಾಡುತ್ತಿರುವ ಸರ್ಕಾರದ ನಿಲುವು ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.
ಅಮ್ಯೂಸ್ಮೆಂಟ್ ಯೋಜನೆ ಹಾಗೂ ಕಾವೇರಿ ಆರತಿ ಯೋಜನೆ ಕೈಬಿಟ್ಟು ಜಿಲ್ಲೆಯಲ್ಲಿನ ಸರ್ಕಾರಿ ಶಾಲೆ ಉಳಿಸಬೇಕೆಂದು ಕನ್ನಡ ಸೇನೆ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ನಗರದ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಸಭೆ ಆಯೋಜಿಸಿ ಜಿಲ್ಲೆಯ ಎಲ್ಲ ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ಚರ್ಚೆ ನಡೆಸಿದ್ದಾರೆ. ಅಂತೆಯೇ ಯೋಜನೆ ವಿರೋಧ ಮಾಡುತ್ತಿರುವುದರಿಂದ ಕೈ ಬಿಡುತ್ತೇವೆ ಎಂದು ಸಚಿವರು ಹೇಳಿದ್ದರು. ಆದರೆ ರಾತ್ರೋರಾತ್ರಿ ಕಾಮಗಾರಿ ಮತ್ತೆ ಪ್ರಾರಂಭವಾಗುತ್ತದೆ. ಇಷ್ಟು ವಿರೋಧದ ಮಧ್ಯದಲ್ಲೂ ಪಾರ್ಕ್ ನಿರ್ಮಾಣ ಮತ್ತು ಕಾವೇರಿ ಆರತಿ ಹೆಸರಿನಲ್ಲಿ ಸಾರ್ವಜನಿಕ ತೆರಿಗೆ ಹಣ ಬಳಕೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಯಾವುದೇ ಕಾರಣಕ್ಕೂ 90 ಕೋಟಿ ರೂ ವೆಚ್ಚದ ಕಾವೇರಿ ಆರತಿ ಯೋಜನೆ ಮಾಡಬಾರದು. ಜಿಲ್ಲೆಯಲ್ಲಿ ನೂರಾರೂ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯವಿಲ್ಲ. ಪರಿಣಾಮ ವಿದ್ಯಾರ್ಥಿಗಳು ಪರಿತಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಎರಡು ಯೋಜನೆಗೆ ಬಳಸುವ ಹಣವನ್ನು ಸರ್ಕಾರಿ ಶಾಲೆ ಅಭಿವೃದ್ಧಿಗೆ ವ್ಯಯಿಸಬೇಕೆಂದು ಆಗ್ರಹಿಸಿದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸೌಭಾಗ್ಯಾ, ಜಿಲ್ಲಾ ಕಾರ್ಯಾಧ್ಯಕ್ಷ ಮಂಜುನಾಥ್, ರಾಜ್ಯ ಸಂಚಾಲಕ ಜಿ.ಮಹಾಂತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಪದಾಧಿಕಾರಿಗಳಾದ ಜಯಮ್ಮ, ಶಾಲಿನಿ, ಮಂಗಳಮ್ಮ, ವೇಣುಗೋಪಾಲ್, ಪ್ರಸನ್ನ, ಮದ್ದೂರು ತಾಲೂಕು ಅಧ್ಯಕ್ಷ ರಾಘವೇಂದ್ರ, ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷ ರಘು, ಕುಮಾರ್, ಅಭಿಷೇಕ್, ರಾಜೇಶ್ ಇದ್ದರು.