ತ.ನಾಡಿಗೆ ಕಾವೇರಿ ನೀರು ಹರಿಸಲು ಸೂಚನೆ: ಬಾಯಿ ಬಡಿದುಕೊಂಡು ಕನ್ನಡಸೇನೆ ಪ್ರತಿಭಟನೆ

Kannada Sena Cauvery protest Mandya
Published on

ಮಂಡ್ಯ: ಕಾವೇರಿಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿನಿತ್ಯ ಒಂದು ಟಿಎಂಸಿ ನೀರು ಹರಿಸಬೇಕೆಂದು ಸೂಚಿಸಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ನೀರು ಬಿಟ್ಟಿರುವ ರಾಜ್ಯ ಸರ್ಕಾರದ ವಿರುದ್ಧ ಕನ್ನಡ ಸೇನೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಸೇನೆಯ ಕಾರ್ಯಕರ್ತರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಕಾವೇರಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರ, ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಬಾಯಿ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ಸೇನೆಯ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಮಾತನಾಡಿ, ಸಮಿತಿ ಸೂಚನೆಯಂತೆ ಪ್ರತಿನಿತ್ಯ ಒಂದು ಟಿಎಂಸಿ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಬದಲಾಗಿ ಎಂಟು ಸಾವಿರ ಕ್ಯೂಸೆಕ್ ನೀರು ಬಿಡಲಾಗುವುದು ಎಂದು ಸರ್ವ ಪಕ್ಷಗಳ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೆ ಈಗ ಕಾವೇರಿ ಕೊಳ್ಳದ ಜಲಾಶಯಗಳಿಂದ ಇಪ್ಪತ್ತು ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದಾರೆ ಎಂದರು.

ಸಮಿತಿಯ ಸೂಚನೆಗಿಂತ ಹೆಚ್ಚಿನ ಪ್ರಮಾಣದಲ್ಲಿ ತ.ನಾಡಿಗೆ ನೀರು ಬಿಡುವ ಮೂಲಕ ರಾಜ್ಯದ ಜನತೆಗೆ ದ್ರೋಹ ಮಾಡಲಾಗಿದೆ. ಕಳೆದ ವರ್ಷ ನೀರಿಲ್ಲದೆ ರೈತರು ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಕೆಆರ್‌ಎಸ್‌ಗೆ ನೀರು ಬಂದಿದೆ. ಜಿಲ್ಲೆಯ ಕೆರೆ ಕಟ್ಟೆಗಳು ತುಂಬಿಲ್ಲ. ಆದರೂ ಕೂಡ ನೆರೆ ರಾಜ್ಯಕ್ಕೆ ನೀರು ಬಿಡುವ ಮೂಲಕ ಜಲಾಶಯ ಖಾಲಿ ಮಾಡಲು ಮುಂದಾಗಿದೆ. ವಿಧಾನ ಮಂಡಲದ ಅಧಿವೇಶನ ಆರಂಭಗೊಂಡಿದ್ದು, ಜಿಲ್ಲೆಯ ಶಾಸಕರು ಸದನದಲ್ಲಿ ದನಿ ಎತ್ತಬೇಕು. ಕಳೆದ ವರ್ಷದಂತೆ ಮೌನವಹಿಸಿ ಕೂರಬಾರದು. ಇಲ್ಲದಿದ್ದರೆ ಜಿಲ್ಲೆಗೆ ಬಂದಾಗ ಶಾಸಕರನ್ನು ತಡೆಯಲಾಗುವುದು ಎಂದು ಎಚ್ಚರಿಸಿದರು.

ರಾಜ್ಯದಿಂದ ಚುನಾಯಿತರಾಗಿರುವ ಸಂಸದರು ಕಾವೇರಿ ವಿಚಾರದಲ್ಲಿ ಬಾಯಿ ಬಿಟ್ಟಿಲ್ಲ. ಈಗಲಾದರೂ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರಕ್ಕೆ ಕಾವೇರಿ ಕೊಳ್ಳ ಪ್ರದೇಶದ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಲು ಮುಂದಾಗಬೇಕು. ಎಲ್ಲ ಸಂಸದರು ಪತ್ರ ಬರೆದು ಪರಿಸ್ಥಿತಿ ವಿವರಿಸಬೇಕು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಸಿ ಒಮ್ಮತದ ತೀರ್ಮಾನ ಕೈಗೊಂಡು ಕಾವೇರಿ ನೀರು ಉಳಿಸುವ ಜತೆಗೆ ರೈತರ ಹಿತ ಕಾಪಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸೇನೆಯ ರಾಜ್ಯ ಸಂಚಾಲಕ ಮಹಾಂತಪ್ಪ, ಬೆಟ್ಟಹಳ್ಳಿ ಮಂಜುನಾಥ್, ಸೌಭಾಗ್ಯಾ, ಪವಿತ್ರಾ, ಇಂದ್ರಮ್ಮ, ನಂದಿನಿ, ದೇವು, ಶಿವು, ಚಂದ್ರು, ಕುಮಾರ ಯರಹಳ್ಳಿ, ಮಧು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net