ಮೂಲ್ಕಿ: ಕನ್ನಡವನ್ನು ಬಿಟ್ಟು ಕೊಡುವಷ್ಟು ಧಾರಾಳ ಬೇಡ ಎಂದು ರಾಯಚೂರು ಕೃಷಿ ಮೇಳದಲ್ಲಿ ಸಿದ್ದರಾಮಯ್ಯ ಅವರು ಹೇಳಿರುವುದು ಸಂತೋಷ ತಂದಿದೆ. ಆದರೆ ಕನ್ನಡ ಸುವರ್ಣ ಮಹೋತ್ಸವ ರಥಯಾತ್ರೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರಥಯಾತ್ರೆ ಕೇವಲ ಪ್ರಚಾರ ಪ್ರಿಯವಾಗಿದೆ ಎಂದು ಡಾ.ಹರಿಕೃಷ್ಣ ಪುನರೂರು ತಿಳಿಸಿದ್ದಾರೆ.
ಕನ್ನಡದ ಬಗ್ಗೆ ನಿಜವಾದ ಕಾಳಜಿ ಇದ್ದರೆ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ಶ್ರಮಿಸಲಿ. ಸಾಧ್ಯವಾದಷ್ಟು ಇಂಗ್ಲಿಷ್ ಶಾಲೆಗಳಿಗೆ ನೀಡುವ ಅನುಮತಿ ಕಡಿಮೆ ಮಾಡಿ. 23 ವರ್ಷದಿಂದ ಕನ್ನಡ ಶಾಲೆಗಳಿಗೆ ಶಿಕ್ಷಕರ ನೇಮಕಾತಿಯಾಗಿಲ್ಲ. ವರ್ಷಕ್ಕೆ 2ರಿಂದ 3 ಸಾವಿರ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಒಬ್ಬ ಶಿಕ್ಷಕನಿಗೆ 2 ಮತ್ತು 3 ಶಾಲೆಗಳಿಗೆ ಉಸ್ತುವಾರಿ ನೀಡಲಾಗಿದೆ. ಕರ್ನಾಟಕದಲ್ಲಿ ಕನ್ನಡ ಶಾಲೆಗಳಿಗೆ ಬೆಲೆ ಇಲ್ಲದಾಗಿದೆ. ನಾನು ನಡೆಸುತ್ತಿದ್ದ 10 ಕನ್ನಡ ಶಾಲೆಗಳಲ್ಲಿ 7 ಶಾಲೆಗಳನ್ನು ಮುಚ್ಚಲಾಗಿದೆ. ಇದೇ ರೀತಿ ಮುಂದುವರಿದರೆ ಕನ್ನಡ ಶಾಲೆ ಉಳಿಯುವುದಿಲ್ಲ. ಈ ಬಗ್ಗೆ ಕಾಳಜಿ ವಹಿಸಿ ಕನ್ನಡ ಶಾಲೆಗಳಿಗೆ ಮೂಲ ಸೌಕರ್ಯ, ಶಿಕ್ಷಕರನ್ನು ನೇಮಿಸಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಿ ಸರ್ಕಾರದ ಉನ್ನತ ಹುದ್ದೆಗಳಲ್ಲಿ ಆದಷ್ಟು ಕನ್ನಡಿಗ ಅಧಿಕಾರಿಗಳನ್ನು ನೇಮಿಸಿ. ಇದೆಲ್ಲ ಸಾಧ್ಯವಾದಾಗ ನಿಜವಾದ ಕನ್ನಡ ಪ್ರೇಮ ಜನರಿಗೆ ತಿಳಿಯುತ್ತದೆ. 1956ರಲ್ಲಿ ಕರ್ನಾಟಕ ರಾಜ್ಯ ಉದಯವಾಗಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.