

ಶ್ರೀನಿವಾಸಪುರ: ಸಾಮಾನ್ಯವಾಗಿ ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯವವರೇ ಹೆಚ್ಚು. ಪಾಲಕರು ಖಾಸಗಿಯತ್ತ ಮುಖ ಮಾಡುತ್ತಿರುವ ಹೊತ್ತಿನಲ್ಲಿ ಗಡಿ ಹಂಚಿಕೊಂಡಿರುವ ಆಂಧ್ರಪ್ರದೇಶದ ಮಕ್ಕಳನ್ನೂ ಸೆಳೆಯುವ ಮೂಲಕ ಖಾಸಗಿ ಶಾಲೆಯನ್ನು ಮೀರಿಸುವಷ್ಟರ ಮಟ್ಟಿಗೆ ಇಲ್ಲೊಂದು ಕನ್ನಡ ಶಾಲೆ ಕನ್ನಡದ ಕಂಪು ಪಸರಿಸುತ್ತಿದೆ.
ಹೌದು. ಶ್ರೀನಿವಾಸಪುರ ತಾಲೂಕು ಕೇಂದ್ರದಿಂದ 45 ಕಿಮೀ ದೂರದ ಪುಲಗೂರಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿ.ಚನ್ನಯ್ಯಗಾರಿಪಲ್ಲಿ ಗ್ರಾಮದ ಸರ್ಕಾರಿ ಶಾಲೆಯೇ ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವ ರೀತಿ ಅಭಿವೃದ್ಧಿಗೊಂಡಿದ್ದು, ಗುಣಮಟ್ಟದ ಶಿಕ್ಷಣದಿಂದಲೇ ಪ್ರ್ರಖ್ಯಾತಿ ಪಡೆದಿದೆ.
ಆಂಧ್ರದ ಚಂಬಕೂರು ಗ್ರಾಮದಿಂದ ಕೊತ್ತಿಂಡ್ಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಒಂದು ಭಾಗವು ರಾಜ್ಯದ ಪಿ.ಚನ್ನಯ್ಯಗಾರಿಪಲ್ಲಿಗೆ ಸೇರಿದರೆ, ಮತ್ತೊಂದು ಭಾಗ ಆಂಧ್ರ ಪ್ರದೇಶದ ಕೊತ್ತಿಂಡ್ಲು ಗ್ರಾಮ ವ್ಯಾಪ್ತಿಗೊಳಪಡುತ್ತದೆ. ಗಡಿ ಗ್ರಾಮಗಳು ಅಕ್ಕಪಕ್ಕದಲ್ಲೇ ಇದ್ದು, ಎರಡು ಗ್ರಾಮಗಳಲ್ಲಿ ಶಾಲೆ ಇದ್ದರೂ ಕರ್ನಾಟಕದ ಪಿ.ಚನ್ನಯ್ಯಗಾರಿಪಲ್ಲಿ ಶಾಲೆಯಲ್ಲಿ ಆಂಧ್ರ ಪ್ರದೇಶದ ಮಕ್ಕಳು ದಾಖಲಾಗುತ್ತಿರುವುದು ವಿಶೇಷ.
ರಾಜ್ಯದ ಪಿ.ಚನ್ನಯ್ಯಗಾರಿಪಲ್ಲಿ ಗ್ರಾಮದಲ್ಲಿ 25 ಕುಟುಂಬ, 102 ಜನಸಂಖ್ಯೆ ಹಾಗೂ ಆಂಧ್ರಪ್ರದೇಶದ ಅಲ್ಚೇಪಲ್ಲಿ ಗ್ರಾಮದಲ್ಲಿ 27 ಕುಟುಂಬ, 125 ಜನಸಂಖ್ಯೆ ಹೊಂದಿದೆ.
ಆಂಧ್ರದ ಅಲ್ಚೇಪಲ್ಲಿಯಲ್ಲಿ ತರೆಯಲಾಗಿದ್ದ ತೆಲುಗು ಸರ್ಕಾರಿ ಶಾಲೆಯು 2008ರವರೆಗೆ ಕಾರ್ಯನಿರ್ವಹಿಸುತ್ತಿತ್ತು. ನಂತರ ವಿದ್ಯಾರ್ಥಿಗಳ ದಾಖಲಾತಿ ಕೊರತೆಯಿಂದ ಹಂತ ಹಂತವಾಗಿ ಶಾಲೆ ಮುಚ್ಚಲಾಗಿದೆ. ಅಲ್ಚೇಪಲ್ಲಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆಡು ಭಾಷೆ ತೆಲುಗು. ಆದರೆ ಇಲ್ಲಿನ ಮಕ್ಕಳು ಕನ್ನಡ ಭಾಷೆಯ ಸರ್ಕಾರಿ ಶಾಲೆಯಲ್ಲೇ ವ್ಯಾಸಂಗ ಮಾಡುತ್ತಿದ್ದಾರೆ. ಇನ್ನು ರಾಜ್ಯದ ಪಿ.ಚನ್ನಯ್ಯಗಾರಿಪಲ್ಲಿ ಗ್ರಾಮದಲ್ಲಿ 2003ರಲ್ಲಿ ಪ್ರಾರಂಭವಾದ ಸರ್ಕಾರಿ ಶಾಲೆಯಲ್ಲಿ 1 ರಿಂದ 5ನೇ ತರಗತಿವರೆಗೂ ಇದ್ದು, ಆರಂಭದಲ್ಲಿ ಆಂಧ್ರ ಮತ್ತು ಕರ್ನಾಟಕ 15 ವಿದ್ಯಾರ್ಥಿಗಳು ದಾಖಲಾಗಿದ್ದರು. ಪ್ರಸ್ತುತ 2023&-24ನೇ ಸಾಲಿನಲ್ಲಿ ಒಟ್ಟು 18 ವಿದ್ಯಾರ್ಥಿಗಳಿದ್ದು, ಇದರಲ್ಲಿ ರಾಜ್ಯದ 11 ವಿದ್ಯಾರ್ಥಿಗಳು, ಆಂಧ್ರ ಪ್ರದೇಶದ 7 ವಿದ್ಯಾರ್ಥಿಗಳು ಕನ್ನಡ ಪಾಠ ಕಲಿಯುತ್ತಿದ್ದಾರೆ. ಶಿಕ್ಷಕರು ಗುಣಮಟ್ಟದ ಶಿಕ್ಷಣ ದೊರಕಿಸಿಕೊಡಲು ಆದ್ಯತೆ ನೀಡಿದ್ದಾರೆ.
ಶಾಲೆಗೆ ಇನ್ನೂ ಏನು ಬೇಕು?: ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವಾಟರ್ ಫಿಲ್ಟರ್, ಭೋಜನಾಲಯ, ರಂಗ ಮಂದಿರ, ಉಚಿತ ನೋಟ್ ಪುಸ್ತಕ ಮತ್ತು ಲೇಖನಿ ಸಾಮಾಗ್ರಿಗಳನ್ನು ನೀಡುವ ದಾನಿಗಳು, ಗ್ರಂಥಾಲಯಕ್ಕೆ ಪುಸ್ತಕಗಳು, ಹಳೇ ಶಾಲಾ ಕಟ್ಟಡ ದುರಸ್ತಿ, ಧ್ವನಿವರ್ಧಕ, ಗಣಕಯಂತ್ರ, ಪ್ರಿಂಟರ್ ಅವಶ್ಯವಿದೆ.
ಸ್ವಂತ ಖರ್ಚಿನಲ್ಲಿ ಶಾಲೆ ಅಭಿವೃದ್ಧಿ
ಶಾಲಾ ಶಿಕ್ಷಕರು ಸ್ವಂತ ಖರ್ಚಿನಿಂದ ಒಂದು ತರಗತಿ ಕೊಠಡಿ, ಮಕ್ಕಳಿಗೆ ವರ್ಷಕ್ಕೆ ಎರಡು ಜತೆ ಸಮವಸ್ತ್ರ, ಉಚಿತವಾಗಿ ನೋಟ್ಬುಕ್, ಲೇಖನಿ ಸಾಮಗ್ರಿ ವಿತರಣೆ, ಪ್ರ್ರೊಜೆಕ್ಟರ್ ಹಾಗೂ ಇತರ ಮೂಲ ಸೌಲಭ್ಯ ಒದಗಿಸಿದ್ದಾರೆ.
ಗಣ್ಯರಿಂದ ಪ್ರಶಂಸೆ
ಹಿಂದಿನ ಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್, ಕೋಲಾರ ಜಿಲ್ಲಾಧಿಕಾರಿ ವೆಂಕಟ್ರಾಜು, ಶ್ರೀನಿವಾಸಪುರ ತಾಲೂಕು ತಹಸೀಲ್ದಾರ್ ರಾಜೀವ್, ಇಒ ಆನಂದ್, ಸಾಹಿತಿ ಸ.ರಘುನಾಥ ಹಾಗೂ ಇತರ ಗಣ್ಯರು ಶಾಲೆಗೆ ಭೇಟಿ ಶಾಲಾವರಣ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕಂಡು ಪ್ರಶಂಸಿಸಿದ್ದರು.
ಶಾಲೆಗೆ ಬರುವ ವಿದ್ಯಾರ್ಥಿಗಳ ಪೈಕಿ ಅರ್ಧದಷ್ಟು ವಿದ್ಯಾರ್ಥಿಗಳು ಆಂಧ್ರಪ್ರದೇಶದ ವಿದ್ಯಾರ್ಥಿಗಳೇ ಆಗಿದ್ದು, ಅವರಿಗೆ ಪ್ರಾರಂಭದಲ್ಲಿ ಕನ್ನಡ ಕಲಿಕೆಯು ಕಷ್ಟಕರವಾಗುತ್ತದೆ. ಅವರಿಗೆ ಸಮುದಾಯದ ಸಹಭಾಗಿತ್ವದೊಂದಿಗೆ ಕನ್ನಡ ಭಾಷೆ ಕಲಿಸಿ ಕನ್ನಡಭಾಷಾಭಿಮಾನ ಬೆಳಸಲಾಗುತ್ತದೆ.- ಎಸ್.ಎನ್.ಕೋದಂಡರಾಮಯ್ಯ, ಶಿಕ್ಷಕ, ಪಿ.ಚನ್ನಯ್ಯಗಾರಿಪಲ್ಲಿನಮ್ಮೂರಿನ ಸರ್ಕಾರಿ ಶಾಲೆಯು ಖಾಸಗಿ ಶಾಲೆಗಿಂತ ಕಡಿಮೆ ಇಲ್ಲದಂತೆ ಇದೆ. ಶಿಕ್ಷಕರು ಪಾಠಪ್ರವಚನ ಹಮ್ಮಿಕೊಂಡಿರುವುದು ಸಂತಸ ತಂದಿದ್ದು, ಶಾಲೆಯ ಪ್ರಗತಿಗಾಗಿ ಹಗಲಿರುಳು ದುಡಿಯುತ್ತೇನೆ - ವಿಜಯಕುಮಾರ್, ಅಧ್ಯಕ್ಷ, ಎಸ್ಡಿಎಂಸಿಶಾಲೆ ಹಾಗೂ ನಮ್ಮ ವಿದ್ಯಾರ್ಥಿಗಳ ಪ್ರಗತಿಯೇ ನಮ್ಮ ಧ್ಯೇಯವಾಗಿದೆ. ಸರ್ಕಾರಿ ಶಾಲೆ ಎಂದರೆ ಎಲ್ಲರಿಗೂ ಉದಾಸೀನವೇ ಹೆಚ್ಚು. ಅದರ ಬಗ್ಗೆ ತಲೆಕಡಿಸಿಕೊಳ್ಳದೆ ಗಡಿಭಾಗದಲ್ಲೊಂದು ಕನ್ನಡ ಶಾಲೆ ಉಳಿಸಿ, ಬೆಳಸಬೇಕೆಂಬುದು ನಮ್ಮ ಆಶಯ. - ಎಸ್.ಜಿ.ಆನಂದ್ಕುಮಾರ್, ಮುಖ್ಯಶಿಕ್ಷಕ, ಪಿ.ಚನ್ನಯ್ಯಗಾರಿಪಲ್ಲಿ