ನಾಡಿನ ಹಿತ ಕಾಪಾಡಲು ರಾಜಕಾರಣಿಗಳು ವಿಫಲ, ಸಾ.ರಾ.ಗೋವಿಂದು ಅಸಮಾಧಾನ

4-klr-2
Published on

ಕೋಲಾರ: ಕನ್ನಡ ನೆಲ, ಜಲ ಮತ್ತು ಕನ್ನಡಿಗರ ಹಿತಕ್ಕಾಗಿ ಹೋರಾಡುವ ಕನ್ನಡಪರ ಸಂಘಟನೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡುವ ಸರ್ಕಾರಕ್ಕೆ ಜನ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಹೇಳಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಕಸಾಪ ಜಿಲ್ಲಾ ಮತ್ತು ತಾಲೂಕು ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಸರ್ಕಾರದ ಪ್ರತಿನಿಧಿಗಳು ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಲುವಾಗಿ ಮರಾಠಿಗರ ಅಭಿವೃದ್ಧಿ ಪ್ರಾಧಿಕಾರ ರಚಿಸಿ 50 ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ರಾಜಕೀಯ ಲಾಭಕ್ಕೆ ರಚಿಸಿರುವ ಪ್ರಾಧಿಕಾರದ ವಿರುದ್ಧ ಕನ್ನಡಪರ ಸಂಘಟನೆಗಳು ಹೋರಾಡಿದರೆ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಕಿಡಿಕಾರಿದರು.

ಕಸಾಪ ವಿರುದ್ಧ ಅಸಮಾಧಾನ: ಒಂದು ಕಡೆ ಸರ್ಕಾರದಿಂದ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ, ಮತ್ತೊಂದೆಡೆ ವಿರೋಧ ಪಕ್ಷಗಳ ಅವಕಾಶವಾದಿ ರಾಜಕಾರಣ, ಸ್ವಾರ್ಥಕ್ಕಾಗಿ ಹುಟ್ಟಿಕೊಂಡಿರುವ ಕನ್ನಡಪರ ಸಂಘಟನೆ ಹಾಗೂ ನಾಡಿನ ಹಿತ ಕಾಪಾಡಬೇಕಾದ ಕನ್ನಡ ಸಾಹಿತ್ಯ ಪರಿಷತ್ ನಿರ್ಲಕ್ಷ್ಯದಿಂದ ಅನ್ಯಾಯ ತಡೆಯಲಾಗುತ್ತಿಲ್ಲ ಎಂದರು.

ಕನ್ನಡಪರ ಸಂಘಟನೆಗಳು ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರುದ್ಧ ಹೋರಾಟ ಮಾಡಿದಾಗ ಕನ್ನಡಪರ ಸಂಘಟನೆಯ ಕೆಲ ಬಣಗಳು ಕಾಲೆಳೆಯುವ ಕೆಲಸ ಮಾಡಿದವು. ಹೋರಾಟಕ್ಕೆ ಬೆಂಬಲ ನೀಡಬೇಕಿದ್ದ ಕಸಾಪ ಅನುದಾನಕ್ಕೆ ಹೊಡೆತ ಬೀಳುತ್ತದೆ ಎಂಬ ಭಯದಿಂದ ತಟಸ್ಥವಾಯಿತು. ಪ್ರತಿಪಕ್ಷಗಳು ನಾಡಿನ ಹಿತಕ್ಕಿಂತ ರಾಜಕೀಯ ಮುಖ್ಯವೆಂದು ಸಾಬೀತು ಮಾಡಿರುವುದರಿಂದ ಹೋರಾಟಕ್ಕೆ ಹಿನ್ನಡೆಯಾಗಿದೆ ಎಂದರು.

ಸಂಘಟನೆಗಳಿಗೆ ಚಾಟಿ: ಕನ್ನಡಪರ ಸಂಘಟನೆ ಹೋರಾಟಗಾರರು ಸ್ವಾರ್ಥ ಬಿಟ್ಟು ಕೆಲಸ ಮಾಡಬೇಕು. ರಾಜ್ಯದಲ್ಲಿರುವ ಅನೇಕ ಕನ್ನಡಪರ ಸಂಘಟನೆಗಳ ಅಧ್ಯಕ್ಷರ ಹಿಂದೆ ಬೆಂಬಲಿಗರು ಇಲ್ಲದಿದ್ದರೂ ರಾಜ್ಯಾಧ್ಯಕ್ಷ ಎಂದು ಕಾರಿನ ಮೇಲೆ ಫಲಕ ಹಾಕಿಸಿಕೊಂಡಿದ್ದಾರೆ. ಇವರು ಸತ್ತರೂ ಹೆಣ ಹೊರಲು 4 ಜನ ಬರೋದಿಲ್ಲ, ಟೋಲ್‌ಗಳಲ್ಲಿ ಫ್ರೀಯಾಗಿ ಓಡಾಡಲು ರಾಜ್ಯಾಧ್ಯಕ್ಷ ಎಂದು ಬರೆಸಿಕೊಂಡಿದ್ದಾರೆ ಎಂದು ಸಾ.ರಾ.ಗೋವಿಂದು ಕುಹಕವಾಡಿದರು.

ಹೋರಾಟಕ್ಕೆ ಸಜ್ಜಾಗಿ: ಮಹದಾಯಿ ಮತ್ತು ಮೇಕೆದಾಟು ಯೋಜನೆ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಲು ಶೀಘ್ರ ಹೋರಾಟ ರೂಪಿಸಲಿದ್ದು ಎಲ್ಲ ಕನ್ನಡಪರ ಸಂಘಟನೆಗಳು ಸಜ್ಜಾಗಬೇಕು ಎಂದು ಕರೆ ನೀಡಿದರು.

ನಿಸ್ವಾರ್ಥ ಸೇವೆ ಸಲ್ಲಿಸಿ: ಕನ್ನಡಪರ ಸಂಘಟನೆ ಮುಖಂಡರು ಭಿನ್ನಾಭಿಪ್ರಾಯ ಬದಿಗೊತ್ತಿ ನಿಸ್ವಾರ್ಥ ಸೇವೆ ಸಲ್ಲಿಸಿ ಕನ್ನಡಿಗರ ಹಿತ ಕಾಪಾಡಬೇಕೆಂದು ಕನ್ನಡ ಹೋರಾಟಗಾರ, ಸಮ್ಮೇಳನಾಧ್ಯಕ್ಷ ಅ.ಕೃ.ಸೋಮಶೇಖರ್ ಸೂಚ್ಯವಾಗಿ ನುಡಿದರು. ನಾನು ಭಾಷಣಕಾರನಲ್ಲ, ಕನ್ನಡ ವಿರೋಧಿಗಳ ಮುಂದೆ ತಲೆ ಎತ್ತಿ, ಎದೆಯುಬ್ಬಿಸಿ ಉತ್ತರಿಸಬಲ್ಲೆ. ಆದರೆ ಕನ್ನಡಿಗರ ಮುಂದೆ ಮಾತನಾಡಲಾರೆ. ಕನ್ನಡ ಭಾಷೆ ಮಾತ್ರವಲ್ಲ, ಅದು ಸಮಸ್ತ ಕನ್ನಡಿಗರ ಗುರುತು, ಕನ್ನಡ ಉಳಿಸಿ ಬೆಳೆಸುವ ಕರ್ತವ್ಯ ಪ್ರತಿಯೊಬ್ಬರದು. ನಾನು ಕನ್ನಡ ಹೋರಾಟಗಾರನೆಂದು ಗುರುತಿಸಿಕೊಂಡಿದ್ದರೆ ಅದಕ್ಕೆ ಜಿಲ್ಲೆಯ ಸಹೃದಯ ಕನ್ನಡಿಗರ ಬೆಂಬಲ ಕಾರಣ ಎಂದರು.

ಕೈ ಬೆರಳು ಮುರಿದಿತ್ತು: ಗೋಕಾಕ್ ಚಳವಳಿ ಸಂದರ್ಭದಲ್ಲಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸಲು ಕೋಲಾರಕ್ಕೆ ಡಾ.ರಾಜಕುಮಾರ್ ಬಂದಿದ್ದರು. ರಾಜ್ ಭಾಷಣ ಕೇಳಬೇಕು, ಹೋರಾಟದಲ್ಲಿ ಭಾಗಿಯಾಗಬೇಕೆಂಬ ಆಸೆಯಿಂದ ಹೋಗಿದ್ದಾಗ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿದಾಗ ನನ್ನ ಎಡಗೈ ಬೆರಳಿಗೆ ಬಲವಾದ ಪೆಟ್ಟು ಬಿದ್ದು ಇಂದಿಗೂ ಈ ಬೆರಳು ಡೊಂಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ನೆನಪು ಮಾಡಿಕೊಂಡರು.

ಸ್ಥಳೀಯರಿಗೆ ಮನ್ನಣೆ: 15 ವರ್ಷಗಳ ಹಿಂದೆ ಕೋಲಾರದಲ್ಲಿ ಮಾಜಿ ಸಚಿವ ಸಿ.ಬೈರೇಗೌಡರ ನೇತೃತ್ವದಲ್ಲಿ 3 ದಿನ ನಾಡಹಬ್ಬ ಆಚರಿಸಿ ಸ್ಥಳೀಯ ಕಲಾವಿದರಿಗೆ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅದೇ ರೀತಿ ಮುಂದಿನ ದಿನಗಳಲ್ಲಿ ನಾಡ ಹಬ್ಬ ಆಚರಿಸಿದಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಇಂಚರ ಗೋವಿಂದರಾಜು ಭರವಸೆ ನೀಡಿದರು.

ಪರಂಪರೆ ವಿಶ್ವಕ್ಕೆ ಮಾದರಿ: ಹಳೆಯ, ನವ್ಯ, ಬಂಡಾಯ ಹಾಗೂ ದಲಿತ ಸಾಹಿತ್ಯದಿಂದ ನಾಡಿನ ಪರಂಪರೆ ವಿಶ್ವಕ್ಕೆ ಮಾದರಿಯಾಗಿದೆ. ಯುವಕರು, ವಿದ್ಯಾರ್ಥಿಗಳು ಸಾಹಿತ್ಯ ಓದಿ ಕನ್ನಡ ನಾಡಿಗೆ ಇನ್ನಷ್ಟು ವಿಶೇಷ ಸ್ಥಾನಮಾನ ದೊರೆಯುವಂತೆ ಜಾಗೃತರಾಗಬೇಕೆಂದು ಕೋಲಾರ ತಹಸೀಲ್ದಾರ್ ಶೋಭಿತಾ ಹೇಳಿದರು.

ಸಾಲ ಮಾಡಿ ಕನ್ನಡಮ್ಮನ ಸೇವೆ: ನನ್ನ ಚಿಕ್ಕಪ್ಪ ಅ.ಕೃ,ಸೋಮಶೇಖರ್ ಪ್ರಾಮಾಣಿಕ ಹೋರಾಟಗಾರ. ಸಂಬಳದ ಜತೆಗೆ ಸಾಲ ಮಾಡಿ ಕನ್ನಡಮ್ಮನ ಸೇವೆ ಮಾಡಿದ್ದಾರೆ. ಕನ್ನಡಪಕ್ಷದಿಂದ ವಜಾ ಮಾಡಿದಾಗಲೂ ಸೇವೆ ಬಿಡಲಿಲ್ಲ, ಇವರಿಂದ ನನಗೂ ಕೀರ್ತಿ ಸಿಕ್ಕಿದೆ, ನಾನಿಂದು ಅಂತಾರಾಷ್ಟ್ರೀಯ ದೇಹದಾರ್ಢ್ಯಪಟುವಾಗಿ ರೂಪುಗೊಳ್ಳಲು ಚಿಕ್ಕಪ್ಪನ ಬೆಂಬಲ ಕಾರಣ ಎಂದು ನಟ ಎ.ವಿ.ರವಿ ಸ್ಮರಿಸಿದರು.

ಹೋರಾಟಕ್ಕೆ ಸಂಪೂರ್ಣ ಬೆಂಬಲ: ಕನ್ನಡಿಗರಿಗೆ ಉದ್ಯೋಗವಕಾಶಕ್ಕಾಗಿ, ಕುಡಿಯುವ ನೀರಿಗಾಗಿ ರೂಪಿಸಿರುವ ಮೇಕೆದಾಟು ಯೋಜನೆ ಜಾರಿಗೆ ಕನ್ನಡ ಸಾಹಿತ್ಯ ಪರಿಷತ್ ಧ್ವನಿ ಎತ್ತಿದೆ. ಸರೋಜಿನಿ ಮಹಿಷಿ ವರದಿ ಜಾರಿಗೆ ಹಾಗೂ ಮೇಕೆದಾಟು ಯೋಜನೆಗಾಗಿ ಕನ್ನಡಪರ ಸಂಘಟನೆಗಳು ಹೋರಾಟ ಕೈಗೆತ್ತಿಕೊಂಡಲ್ಲಿ ಬೆಂಬಲಿಸುವುದಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ನಾಗಾನಂದ ಭರವಸೆ ನೀಡಿದರು.

ವೇದಿಕೆಯಲ್ಲಿ ಭಿನ್ನಮತ ಸ್ಫೋಟ: ಕನ್ನಡ ಹೋರಾಟಗಾರ ಸಾ.ರಾ.ಗೋವಿಂದು ಭಾಷಣದಲ್ಲಿ ಕೆಲ ಕನ್ನಡಪರ ಸಂಘಟನೆಗಳು ಸ್ವಾರ್ಥಕ್ಕಾಗಿ ಹೋರಾಟಗಳ ಉದ್ದೇಶ ಮರೆತಿವೆ, ಹೋರಾಟ ಹತ್ತಿಕ್ಕಲು ಸರ್ಕಾರದೊಂದಿಗೆ ಕೈಜೋಡಿಸಿವೆ ಎಂದಿದ್ದನ್ನು ಕರ್ನಾಟಕ ರಕ್ಷಣಾ ಸೇನೆ ಅಧ್ಯಕ್ಷ ಎಂ.ಆರ್.ನಾರಾಯಣಗೌಡ ಆಕ್ಷೇಪಿಸಿದ್ದು ವೇದಿಕೆಯಲ್ಲಿದ್ದ ಕೆಲ ಹೋರಾಟಗಾರರ ಅಸಮಾಧಾನಕ್ಕೆ ಕಾರಣವಾಯಿತು. ನಾರಾಯಣಗೌಡ ಮಾತನಾಡುವಾಗ ನಾಡಿನ ಹಿತಕ್ಕಾಗಿ ನಾವೂ ಹೋರಾಡುತ್ತಿದ್ದೇವೆ, ಕೆಲವು ಕಾರಣಗಳಿಂದ ಕನ್ನಡಪರ ಸಂಘಟನೆಗಳು ಪ್ರತ್ಯೇಕವಾಗಿರಬಹುದು, ಸಮಿತಿಗಳಿಗೆ ಅನೇಕರು ಅಧ್ಯಕ್ಷರಾಗಿರಬಹುದು, ಹಾಗಂತ ಅಧ್ಯಕ್ಷರ ಹಿಂದೆ 4 ಜನ ಬೆಂಬಲಿಗರಿಲ್ಲ ಎಂದು ಹೇಳುವುದು ಸರಿಯಲ್ಲ ಎಂದರು. ಇದಕ್ಕೆ ಸ್ಪಷ್ಟನೆ ನೀಡಲು ಸಾ.ರಾ.ಗೋವಿಂದು ಪೋಡಿಯಂ ಬಳಿ ಹೋದಾಗ, ಸಾರ್ ನನಗೆ ನಿಮ್ಮ ಬಗ್ಗೆ ಗೌರವ ಇದೆ, ಅಧ್ಯಕ್ಷರ ಹಿಂದೆ ಜನರಿಲ್ಲ, ಸತ್ತರೆ ಹೊರುವವರು ಇಲ್ಲ ಎಂದಿದ್ದು ನೋವಾಯಿತು ಎಂದಾಗ ಕನ್ನಡಮಿತ್ರ ವೆಂಕಟಪ್ಪ ಇನ್ನಿತರರು ಸಾ.ರಾ.ಗೋವಿಂದು ನಿಮ್ಮನ್ನು ಉದ್ದೇಶಿಸಿ ಮಾತನಾಡಿಲ್ಲ. ಕೆಲವರಿಂದ ನಿಜವಾದ ಹೋರಾಟಗಾರರಿಗೆ ಆಗುತ್ತಿರುವ ಬೇಸರ ವ್ಯಕ್ತಪಡಿಸಿದ್ದಾರೆ. ಸ್ಪಷ್ಟನೆ ನೀಡಲು ಅವಕಾಶ ನೀಡಿ ಎಂದು ಪೋಡಿಯಂ ಬಳಿ ಜಮಾಯಿಸಿದಾಗ ಗೊಂದಲ, ಗದ್ದಲ ಉಂಟಾಯಿತು. ನಾಗಾನಂದ ಮತ್ತು ಕಸಾಪದ ಪದಾಧಿಕಾರಿಗಳು ಸೂಕ್ಷ್ಮತೆ ಅರಿತು ಮಧ್ಯ ಪ್ರವೇಶಿಸಿ ಸಮಾಧಾನಪಡಿಸಿದರು.

ಪ್ರಮುಖರ ಉಪಸ್ಥಿತಿ: ಗೋಕುಲ್ ವಿದ್ಯಾಸಂಸ್ಥೆ ಮುಖ್ಯಸ್ಥ ಗೋಕುಲ್ ನಾರಾಯಣಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಅಧ್ಯಕ್ಷ ಜಯದೇವ ಪ್ರಸನ್ನ, ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಕೋ.ನಾ.ಪ್ರಭಾಕರ್, ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ತ್ಯಾಗರಾಜ್, ತಾಲೂಕು ಕಸಾಪ ಅಧ್ಯಕ್ಷ ಪ್ರೊ.ಎಂ.ಮುನಿಸ್ವಾಮಿ, ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಜಿ.ಎಂ.ಗೋಪಿಕೃಷ್ಣನ್, ನಗರಸಭೆ ಅಧ್ಯಕ್ಷೆ ಆರ್.ಶ್ವೇತಾ, ಉಪಾಧ್ಯಕ್ಷ ಪ್ರವೀಣ್ ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ಕಸಾಪ ನಗರ ಘಟಕದ ಅಧ್ಯಕ್ಷ ಬಿ.ಶಿವಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net