16, 17ಕ್ಕೆ ಕೋಲಾರದಲ್ಲಿ 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳ

14-klr-2
Published on

ಕೋಲಾರ: ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಜ.16 ಮತ್ತು 17ರಂದು ನಡೆಯುವ 18ನೇ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್ ಮನವಿ ಮಾಡಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಲೂರಿನ ಚೆನ್ನಿಗರಾಯಪುರದ ನಿವೃತ್ತ ಕನ್ನಡ ಸಹಪ್ರಾಧ್ಯಾಪಕ ಡಾ. ಸಿ.ಎಂ. ಗೋವಿಂದರೆಡ್ಡಿ ಸರ್ವಾಧ್ಯಕ್ಷತೆ ವಹಿಸುವರು. 2200 ಆಹ್ವಾನ ಪತ್ರಿಕೆ ಮುದ್ರಿಸಿ ವಿತರಿಸಲಾಗುತ್ತಿದೆ. ಸಾಮಾಜಿಕ ಜಾಲತಾಣ, ಮಾಧ್ಯಮ, ಪ್ರಮುಖ ವೃತ್ತಗಳಲ್ಲಿ ಫ್ಲೆಕ್ಸ್ ಅಳವಡಿಸಿ ಸಮ್ಮೇಳನದ ಕುರಿತು ಆಹ್ವಾನ, ಮಾಹಿತಿ ನೀಡಲಾಗುತ್ತದೆ ಎಂದರು.

ಸಮ್ಮೇಳನಕ್ಕೆ ಸರ್ಕಾರ ನೀಡುವ 5 ಲಕ್ಷ ರೂ. ಅನುದಾನದಲ್ಲಿ ಜಿಎಸ್‌ಟಿ ಕಳೆದು 4.30 ಲಕ್ಷ ರೂ.ಸಿಗುತ್ತದೆ. ಜನಪ್ರತಿನಿಧಿಗಳು ಸಹಕಾರ ನೀಡಬೇಕು, ದಾನಿಗಳು ಉದಾರ ಮನಸ್ಸಿನಿಂದ ನೆರವಾಗಬೇಕು ಎಂದು ಕೋರಿದರು.

ಒಒಡಿ ಸೌಲಭ್ಯ: ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯುಸಿ ಕಾಲೇಜಿನ ಶಿಕ್ಷಕ, ಉಪನ್ಯಾಸಕರಿಗೆ ಒಒಡಿ ಸೌಲಭ್ಯವಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಜ16ರಂದು ಬೆಳಗ್ಗೆ 8.30ಕ್ಕೆ ಧ್ವಜಾರೋಹಣ, 9ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಕಸಾಪ ಕಚೇರಿಯಿಂದ ಆರಂಭಗೊಂಡು ವಾಲ್ಮೀಕಿ ವೃತ್ತ, ಸಂಗೊಳ್ಳಿರಾಯಣ್ಣ ವೃತ್ತ, ಸರ್ವಜ್ಞ ಪಾರ್ಕ್ ಮೂಲಕ ರಂಗಮಂದಿರ ತಲುಪಲಿದೆ. ಬೆಳಗ್ಗೆ 10.30ಕ್ಕೆ ಸಮ್ಮೇಳನವನ್ನು ಚಿಂತಕ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಉದ್ಘಾಟಿಸುವರು. ಮಧ್ಯಾಹ್ನ 2ರಿಂದ ಕೃಷಿ ಮತ್ತು ಪರಿಸರದ ಪ್ರಶ್ನೆಗಳ ಕುರಿತು ಮೊದಲ ಗೋಷ್ಠಿ, ಸಂಜೆ 4.15ರಿಂದ ವಿಶೇಷ ಉಪನ್ಯಾಸ, ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವವರಿಗೆ ಸನ್ಮಾನ. 5.45ರಿಂದ ವಾದ್ಯಗೋಷ್ಠಿ, ಮಲ್ಲಿಗೆ ನಾಟಕ ಪ್ರದರ್ಶನವಿದೆ ಎಂದು ವಿವರಿಸಿದರು.

ಜ. 17ರಂದು ಬೆಳಗ್ಗೆ 9.30ಕ್ಕೆ ಸಮ್ಮೇಳನಾಧ್ಯಕ್ಷರ ಬದುಕು ಬರಹ ಕುರಿತ ಗೋಷ್ಠಿ, 12ಕ್ಕೆ ಗಡಿ ಮೀರಿದ ಬದುಕು ಅಡಿಯಲ್ಲಿ ಗೋಷ್ಠಿ, 2ಕ್ಕೆ ಕವಿಗೋಷ್ಠಿ, ಸಂಜೆ 4.30ಕ್ಕೆ ಸನ್ಮಾನ ಸಮಾರಂಭ ಹಾಗೂ 5.30ಕ್ಕೆ ಸಮಾರೋಪ ಸಮಾರಂಭ, 6.45ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದಡಿ ಇತಿಹಾಸ, ಸಂಸ್ಕೃತಿ, ಪರಂಪರೆ ಸಾಹಿತ್ಯ ಬಿಂಬಿಸುವ ಕರ್ನಾಟಕ ದರ್ಶನ ನೃತ್ಯ ಕಾರ್ಯಕ್ರಮವಿದೆ ಎಂದರು.

ಕಸಾಪ ಗೌರವ ಕಾರ್ಯದರ್ಶಿ ಆರ್. ಅಶ್ವತ್ಥ್, ಆರ್.ಎಂ. ವೆಂಕಟಸ್ವಾಮಿ, ಗೌರವ ಕೋಶಾಧ್ಯಕ್ಷ ರತ್ನಪ್ಪ ಮೇಲಾಗಣಿ, ಪ್ರಧಾನ ಸಂಚಾಲಕ ಮಾಗೇರಿ ಎಂಪಿ ನಾರಾಯಣಸ್ವಾಮಿ, ನಗರಾಧ್ಯಕ್ಷ ಬಿ.ಶಿವಕುಮಾರ್, ತಾಲೂಕು ಗೌರವಾಧ್ಯಕ್ಷ ಕೆ.ಎನ್. ಪರಮೇಶ್ವರನ್, ಹುತ್ತೂರು ಹೋಬಳಿ ಅಧ್ಯಕ್ಷ ಎಸ್.ಸಿ. ವೆಂಕಟಕೃಷ್ಣಪ್ಪ ಗೋಷ್ಠಿಯಲ್ಲಿ ಹಾಜರಿದ್ದರು.

ಇಪ್ಪತ್ತು ಪುಸ್ತಕ ಮಳಿಗೆ: ಸಮ್ಮೇಳನದಲ್ಲಿ 20 ಪುಸ್ತಕ ಮಳಿಗೆಗಳಿಗೆ ನೋಂದಣಿ ಮಾಡಿಕೊಳ್ಳಲಾಗಿದೆ. ಮಳಿಗೆ ಉಚಿತವಾದ್ದರಿಂದ ರಿಯಾಯಿತಿ ದರಕ್ಕೆ ಪುಸ್ತಕ ಮಾರಲು ಮನವಿ ಮಾಡಲಾಗಿದೆ. ಸಮ್ಮೇಳನದ ಎರಡೂ ದಿನಗಳ ಉಪಾಹಾರ, ಊಟದ ವ್ಯವಸ್ಥೆಯನ್ನು ಹಾಲಿಸ್ಟರ್ ಸ್ಮಾರಕ ಭವನದಲ್ಲಿ ಮಾಡಲಾಗಿದೆ ಎಂದು ನಾಗಾನಂದ ಕೆಂಪರಾಜ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net