

ಮುಳಬಾಗಿಲು: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕಾಗಿದೆ. ಗುಡಿಪಲ್ಲಿ ಗ್ರಾಮ ಆಂಧ್ರ ಗಡಿಭಾಗದಲ್ಲಿದ್ದು ತೆಲುಗು ಮಾತನಾಡಿದರೂ ಲಿಖಿತ ಭಾಷೆ ಕನ್ನಡವಾಗಿರುವುದು ಇಲ್ಲಿನ ವೈಶಿಷ್ಟ್ಯ. ಇದನ್ನು ಎಲ್ಲ ಗಡಿ ಭಾಗಗಳ ಜನರು ಅರಿಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು.
ತಾಲೂಕಿನ ಗುಡಿಪಲ್ಲಿ ಗ್ರಾಮದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ ಮತ್ತು ಶ್ರೀ ರಾಜರಾಜೇಶ್ವರಿ ಕನ್ನಡ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಗುಡಿಪಲ್ಲಿ ಗ್ರಾಪಂ ವ್ಯಾಪ್ತಿಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ ಸಾಹಿತ್ಯ ಗಡಿ ಭಾಗದಲ್ಲಿ ಮೇರು ಪರ್ವತದಲ್ಲಿರಬೇಕು. ಆಗಲೇ ತಾಯಿ ಭಾಷೆಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್ ಮಾತನಾಡಿ, ಗುಡಿಪಲ್ಲಿ ಆಂಧ್ರದ ಗಡಿಯಲ್ಲಿಯೇ ಇದ್ದರೂ ಕನ್ನಡಕ್ಕೆ ಕೊರತೆಯಿಲ್ಲ. ಎಲ್ಲರೂ ಕನ್ನಡ ಶಾಲೆಗಳಲ್ಲೇ ಓದುತ್ತಿರುವುದು ಆಶಾದಾಯಕ ಬೆಳವಣಿಗೆ, ಜಿಲ್ಲಾ ಕಸಾಪದಿಂದ ಕನ್ನಡ ಕಾರ್ಯಕ್ರಮಗಳ ಮೂಲಕ ಭಾಷಾ ಬೆಳವಣಿಗೆಗೆ ಒತ್ತು ನೀಡಲಾಗುತ್ತಿದೆ. ಜಿಲ್ಲೆಯಲ್ಲಿಯೇ ಮುಳಬಾಗಿಲು ತಾಲೂಕಿನಲ್ಲಿ ಹೆಚ್ಚು ಕನ್ನಡ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.
2019-20ನೇ ಸಾಲಿನಲ್ಲಿ ಮುಳಬಾಗಿಲು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್ ತಿಂಗಳಲ್ಲಿ ಮುಳಬಾಗಿಲು ತಾಲೂಕು ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಕನ್ನಡ ಕಟ್ಟಾಳು ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಚಾಂದ್‌ಪಾಷಾ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಮಾಡಲಾಗಿದೆ ಎಂದು ನಾಗಾನಂದ್ ಕೆಂಪರಾಜ್ ತಿಳಿಸಿದರು.
ತಾಪಂ ಅಸದಸ್ಯ ವಿ.ಮಾರಪ್ಪ, ಎಪಿಎಂಸಿ ಅಧ್ಯಕ್ಷ ಗೊಲ್ಲಹಳ್ಳಿ ವೆಂಕಟೇಶ್, ದರಕಾಸ್ತು ಸಮಿತಿ ಸದಸ್ಯ ಆರ್.ಪೆದ್ದಪ್ಪಯ್ಯ, ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಕೆ.ಎಂ.ಅರುಣಕುಮಾರಿ, ನಗರಸಭೆ ಸದಸ್ಯ ಎಂ.ಪ್ರಸಾದ್, ಅಂತರರಾಷ್ಟ್ರೀಯ ವಾಲಿಬಾಲ್ ಪಟು ಗುಡಿಪಲ್ಲಿ ಕೆ.ಆರ್.ಲಕ್ಷ್ಮೀನಾರಾಯಣ, ಜಿಪಂ ಸದಸ್ಯೆ ನಾಗಮಣಿ, ಗ್ರಾಪಂ ಮಾಜಿ ಅಧ್ಯಕ್ಷ ಕೆ.ವಿ.ಸುಬ್ರಮಣಿರೆಡ್ಡಿ, ಮಾಜಿ ಉಪಾಧ್ಯಕ್ಷ ಪಿ.ಆರ್.ವಿಶ್ವನಾಥಾಚಾರಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಡಿಕಲ್ ವೆಂಕಟಾಚಲಪತಿಗೌಡ, ಕಸಾಪ ಜಿಲ್ಲಾ ಕಾರ್ಯದರ್ಶಿ ಆರ್.ಎಂ.ವೆಂಕಟಸ್ವಾಮಿ, ತಾಲೂಕು ಗೌರವಾಧ್ಯಕ್ಷ ಕೆಂಬೋಡಿ ನಾಗರಾಜ್, ಅಧ್ಯಕ್ಷ ಜಯರಾಮರೆಡ್ಡಿ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು, ಗ್ರಾಮಸ್ಥರು ಇದ್ದರು.
ಗಡಿ ಭಾಗದಲ್ಲಿ ಕನ್ನಡ ಭಾಷೆ, ಸಾಹಿತ್ಯ ಬೆಳೆಯಲು ಕನ್ನಡ ಪುಸ್ತಕಗಳು, ಪತ್ರಿಕೆಗಳು, ಗ್ರಂಥಾಲಯಗಳು ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಬಳಸುವ ಮೂಲಕ ಕನ್ನಡದ ವಾತಾವರಣ ನಿರ್ಮಾಣ ಮಾಡಬೇಕು. ಜಿ.ಎಸ್.ಚಂದ್ರಶೇಖರ್, ಗುಡಿಪಲ್ಲಿ ಸಾಹಿತ್ಯ ಸಮ್ಮೇಳನಾಧ್ಯಕ್ಷ