ಸಾಹಿತ್ಯದಿಂದ ವ್ಯಕ್ತಿತ್ವ ವಿಕಸನ ಸಾಧ್ಯ: ಸುಗುಣೇಂದ್ರ ಶ್ರೀ

udp-30-kannada 2
Published on

ಉಡುಪಿ: ಮನುಷ್ಯನಿಗೆ ಜೀವನದಲ್ಲಿ ಹಣ ಸಂಪಾದನೆಯೊಂದೇ ಮುಖ್ಯ ಎಂಬ ಮನೋಭಾವ ಸಲ್ಲದು. ಭೌತಿಕವಾಗಿ ಸಾಹಿತ್ಯದಿಂದ ವ್ಯಕ್ತಿತ್ವ ಹಾಗೂ ಆತ್ಮ ವಿಕಸನ ಸಾಧ್ಯ. ಕನ್ನಡ ಸಾಹಿತ್ಯ ಶ್ರೀಮಂತವಾಗಿದ್ದು, ಕಲೆ, ಅಧ್ಯಾತ್ಮಿಕತೆಗೆ ಕರ್ನಾಟಕವೇ ತವರು ನೆಲೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ 2 ದಿನ ನಡೆಯುವ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ನ 17ನೇ ಸಾಹಿತ್ಯ ಸಮ್ಮೇಳನ "ಸುಕೃತಿ&2025' ಚಾಲನೆ ನೀಡಿ ಮಾತನಾಡಿದರು.

ಕನ್ನಡದ ಜಾಗೃತಿಗಾಗಿ ಸಾಹಿತ್ಯ ಸಮ್ಮೇಳನಗಳು ಅತೀ ಅವಶ್ಯವಾಗಿದೆ. ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ನೈತಿಕತೆ, ಕಲೆ, ಸಾಹಿತ್ಯಕ್ಕೆ ಗಮನ ಕುಂಠಿತವಾಗಿದೆ. ಹೀಗಾಗಿ ಮಕ್ಕಳಿಗೆ ನಮ್ಮ ನಾಡಿನ ಪರಂಪರೆಯ ಬಗ್ಗೆ ಅರಿವು ಮೂಡಿಸುವುದು ಅಗತ್ಯ ಎಂದರು.

ಕಸಾಪ ರಾಜ್ಯಾಧ್ಯಕ್ಷ ಮಹೇಶ್​ ಜೋಶಿ ಮಾತನಾಡಿ, ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಕನ್ನಡದ ಎರಡು ಕಣ್ಣುಗಳಿದ್ದಂತೆ. ಪುರಾಣಗಳಲ್ಲಿ ಉಲ್ಲೇಖಿಸಿದ 7 ಜನ ಚಿರಂಜೀವಿಗಳಲ್ಲಿ ಪರಶುರಾಮ ಮತ್ತು ಹನುಮಂತ ಕನ್ನಡಿಗರ ಎಂಬುದು ಹೆಮ್ಮೆಯ ಸಂಗತಿ. ಇತ್ತೀಚಿನ ದಿನಗಳಲ್ಲಿ ಕನ್ನಡ ಶಾಲೆ ಮುಚ್ಚುತ್ತಿದ್ದು, ಕನ್ನಡ ಶಾಲೆಗಳನ್ನು ಮತ್ತೆ ತೆರೆಯುವಂತೆ ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನ್ಯಾಯಾಲಯಗಳ ತೀರ್ಪುಗಳಿಂದಲೂ ಈ ಕಾರ್ಯಕ್ಕೆ ಹಿನ್ನೆಡೆಯಾಗಿದೆ. ಹೀಗಾಗಿ ಮಕ್ಕಳನ್ನು ಇಂಗ್ಲಿಷ್​ ಶಾಲೆಗೆ ಕಳುಹಿಸಿದರೂ ಮನೆಯಲ್ಲಿ ಕನ್ನಡ ಮಾತನಾಡಬೇಕು. ಈ ಮೂಲಕ 2 ಸಾವಿರ ವರ್ಷಗಳ ಶ್ರೀಮಂತ ಪರಂಪರೆ ಹೊಂದಿರುವ ಕನ್ನಡದ ಉಳಿವು ಸಾಧ್ಯವಾಗಲಿದೆ ಎಂದರು.

ವಿದ್ವಾಂಸ, ನಿವೃತ್ತ ಪ್ರಾಂಶುಪಾಲ ಡಾ.ಪಾದೇಕಲ್ಲು ವಿಷ್ಣು ಭಟ್​ ಸರ್ವಾಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಶಾಸಕ ಯಶ್​ಪಾಲ್​ ಸುವರ್ಣ, ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಬಾಬು ಪೂಜಾರಿ, ಕಸಾಪ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು, ಉದ್ಯಮಿ ಆನಂದ ಕುಂದರ್​, ಮಾಜಿ ಶಾಸಕ ಕೆ. ರುಪತಿ ಭಟ್​, ತಾಲೂಕು ಅಧ್ಯಕ್ಷರಾದ ಕೆ. ರಾಮಚಂದ್ರ ಐತಾಳ್​, ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಪುಂಡಲೀಕ ಮರಾಠೆ, ಶ್ರೀನಿವಾಸ ಭಂಡಾರಿ, ಡಾ. ಉಮೇಶ್​ ಪುತ್ರನ್​ ಮೊದಲಾದವರು ಉಪಸ್ಥಿತರಿದ್ದರು.

ನರೇಂದ್ರ ಕುಮಾರ್​ ಕೋಟ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪ್ರಸ್ತಾವನೆಗೈದರು. ಡಾ. ಅರುಣ್​ ಕುಮಾರ್​ ಸಮ್ಮೇಳನ ಅಧ್ಯಕ್ಷರನ್ನು ಪರಿಚಿಯಿಸಿದರು. ಸತೀಶ್​ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು. ಪಿ.ವಿ . ಆನಂದ ಸಾಲಿಗ್ರಾಮ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಗೀತಾ ಮಂದಿರದಿಂದ ರಾಜಾಂಗಣವರೆಗೆ ಮೆರವಣಿಗೆಯಲ್ಲಿ ಸಮ್ಮೇಳನಾಧ್ಯಕ್ಷರನ್ನು ಸ್ವಾಗತಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net